10 ರಿಂದ ಆರೋಗ್ಯ ಸೇವೆ ಅನಿರ್ದಿಷ್ಟ ಸ್ಥಗಿತ

ASHA
Published on

ದಾವಣಗೆರೆ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ವೇತನಕ್ಕಾಗಿ ಆಗ್ರಹಿಸಿ ಜು. 10 ರಿಂದ ಆರೋಗ್ಯ ಸೇವೆಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಮಂಜುನಾಥ್ ಕುಕ್ಕವಾಡ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ಕರೊನಾ ತಡೆ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಮನೆಗೂ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡುತ್ತಿಲ್ಲ ಎಂದು ದೂರಿದರು.

ಸ್ಥಳೀಯ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ನಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯ, ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಸ್ಕ್ರೀನಿಂಗ್ ತಂಡಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಪಾಯಕಾರಿ ಕಾರ್ಯಗಳಲ್ಲೂ ಎದೆಗುಂದದೆ ಮುನ್ನಡೆಯುತ್ತಿದ್ದಾರೆ.

ಅವರಿಗೆ ಚಪ್ಪಾಳೆ, ಹೂಮಳೆ ಈ ರೀತಿಯ ಮೆಚ್ಚುಗೆಗೆ ಸಂತಸವಿದೆ. ಆದರೆ, ಕರೊನಾ ತಡೆಯುವಲ್ಲಿ ನಿರತರಾದ ಆಶಾ ಕಾರ್ಯಕರ್ತರಿಗೆ ವೇತನ, ರಕ್ಷಣೆ ಇಲ್ಲದೆ ಕುಗ್ಗುತ್ತಿದ್ದಾರೆ. ಆದ್ದರಿಂದ ಮಾಸಿಕ ಕನಿಷ್ಠ 12 ಸಾವಿರ ವೇತನ ನೀಡಬೇಕು. ಈ ಬೇಡಿಕೆಗಳು ಈಡೇರುವ ತನಕ ಆರೋಗ್ಯ ಸೇವೆ ಸ್ಥಗಿತಗೊಳಿಸಲಾಗುವುದು. ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಜಗಳೂರು ತಾಲೂಕು ಅಧ್ಯಕ್ಷೆ ಮಾರಮ್ಮ, ಕಾರ್ಯದರ್ಶಿ ಲೀಲಾವತಿ, ಆಶಾ ಕಾರ್ಯಕರ್ತೆಯರಾದ ಜುಬೇದಾ, ದುಗ್ಗಮ್ಮ, ನೇತ್ರಾ, ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net