

ದಾವಣಗೆರೆ : ನಗರದ ದೃಶ್ಯಕಲಾ ಕಾಲೇಜಿಗೆ 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವರ್ಷವಿಡೀ ನಡೆದ ವಜ್ರ ಮಹೋತ್ಸವ ಕಾರ್ಯಕ್ರಮಗಳಿಗೆ ಶನಿವಾರ ಸಂಜೆ ತೆರೆ ಬಿತ್ತು. ಕಾಲೇಜು ಆವರಣದ ಥೀಮ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಕಲೆ, ಕಲಾವಿದರ ಬದುಕು ಹಾಗೂ ದೃಶ್ಯಕಲಾ ಕಾಲೇಜಿನ ಅಭಿವೃದ್ಧಿಯ ವಿಚಾರಗಳ ಮೇಲೆ ಬೆಳಕು ಚೆಲ್ಲಿದರು. ಮಹಾವಿದ್ಯಾಲಯ ಅಭಿವೃದ್ಧಿಗೆ ಬದ್ಧವಾಗಿದ್ದು ಸಂಸದರ ಅನುದಾನದಲ್ಲಿ ಶೌಚಗೃಹಗಳ ನಿರ್ಮಾಣಕ್ಕೆ 12 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ 3.36 ಲಕ್ಷ ರೂ. ವೆಚ್ಚದಲ್ಲಿ ಕಾಲೇಜು ಆವರಣದಲ್ಲಿ 200 ಗಿಡಗಳನ್ನು ನೆಡುವ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಐಎಎಸ್, ಕೆಎಎಸ್ ತರಬೇತಿ ಪಡೆಯಲು ಬಯಸುವ 200 ವಿದ್ಯಾರ್ಥಿಗಳಿಗೆ ಎಸ್‌ಎಸ್ ಕೇರ್ ಟ್ರಸ್ಟ್ ವತಿಯಿಂದ ಉಚಿತ ತರಬೇತಿಗೆ ವ್ಯವಸ್ಥೆ ಮಾಡಿದ್ದು ಶೀಘ್ರವೇ ಉದ್ಘಾಟನೆಯಾಗಲಿದೆ ಎಂದು ಹೇಳಿದರು. ಕಾಲೇಜು ಆವರಣದಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿ, ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಮಾಡಬೇಕು. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ರೀತಿ ಕಲಾ ಹಬ್ಬ ಇನ್ನಿತರ ಗುಣಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಳೆಯ ವಿದ್ಯಾರ್ಥಿಗಳ ಸಂಘವನ್ನು ಕ್ರಿಯಾಶೀಲವಾಗಿಸಬೇಕು ಎಂದು ಸಲಹೆ ನೀಡಿದರು. ಕಲೆಗೆ ಬೆಲೆ ಕಟ್ಟಲಾಗದು. ಒಂದು ಒಳ್ಳೆಯ ಹಾಡು ಕೇಳುವುದರಿಂದ, ಉತ್ತಮ ಪುಸ್ತಕ ಓದುವುದರಿಂದ ಸುಂದರ ಅನುಭವವಾಗುತ್ತದೆ. ಕಲಾವಿದರಲ್ಲಿ ಶ್ರದ್ಧೆ, ಬದ್ಧತೆ ಇದ್ದರೆ ಯಶಸ್ಸು ಸಾಧ್ಯವಿದೆ. ಕಠಿಣ ಪರಿಶ್ರಮ, ಸತತ ಪ್ರಯತ್ನವಿರಬೇಕು ಎಂದು ತಿಳಿಸಿದರು. ಜೂನ್ 7ಕ್ಕೆ ನಾನು ಸಂಸದೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ ಎಂದು ತಿಳಿಸಿದ ಅವರು, ಕಳೆದ ಒಂದು ವರ್ಷದಲ್ಲಿ ಲೋಕಸಭಾ ಅಧಿವೇಶನ, ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಆಡಳಿತ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಸೇರಿದಂತೆ ಆಗಿರುವ ಅನುಭವಗಳ ಬಗ್ಗೆ ವಿವರಿಸಿದರು. ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಒಂದು ವರ್ಷದಲ್ಲಿ ವಜ್ರ ಮಹೋತ್ಸವ ಅಂಗವಾಗಿ ಮಾಡಿರುವ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು. ಇತ್ತೀಚೆಗೆ ಕಾಲೇಜಿನಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿದರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ ಸಮಾರೋಪ ನುಡಿಗಳನ್ನಾಡಿದರು. ವಿವಿ ಕುಲಸಚಿವ (ಆಡಳಿತ) ಶಬ್ಬೀರ್ ಬಾಷ ಗಂಟಿ ಸ್ವಾಗತಿಸಿದರು. ಪ್ರಾಧ್ಯಾಪಕ ದತ್ತಾತ್ರೇಯ ಭಟ್ ನಿರೂಪಿಸಿದರು. ರುದ್ರಾಕ್ಷಿಬಾಯಿ ಪ್ರಾರ್ಥಿಸಿದರು.