

ದಾವಣಗೆರೆ : ಎಲ್ಲ ಮಕ್ಕಳು ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಲಾಗದು. ಪಾಲಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಕಲಾ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಹೇಳಿದರು. ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ವಜ್ರಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಚಿಗುರು ಚಿತ್ತಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಕಲೆಯ ಮೇಲಿನ ಆಸಕ್ತಿ ಕಡಿಮೆ ಆಗುತ್ತಿರುವುದರಿಂದ ಕಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಲ್ಲಿ ಚಿತ್ರಕಲಾವಿದ ಅಥವಾ ಶಿಲ್ಪ ಕಲಾವಿದನಾಗುವ ಅವಕಾಶಗಳು ಸಾಕಷ್ಟಿರುತ್ತವೆ. ದೃಶ್ಯಕಲಾ ಕಾಲೇಜಿನಲ್ಲಿ ಹಲವು ವಿಭಾಗಗಳಿವೆ. 12ನೇ ತರಗತಿ ನಂತರ ನಾಲ್ಕು ವರ್ಷದ ಕೋರ್ಸ್‌ಗೆ ಸೇರುವ ಮೂಲಕ ಚಿತ್ರಕಲಾವಿದ, ಫೋಟೋ ಗ್ರಾಫರ್, ಆನಿಮಿಟೇರ್, ಗ್ರಾಫಿಕ್ ಡಿಸೈನರ್ ವಿಭಾಗಗಳಲ್ಲಿ ಪರಿಣಿತರಾಗಬಹುದು ಎಂದು ತಿಳಿಸಿದರು. ಬಹಳ ಜನರಿಗೆ ಶಿಲ್ಪಕಲಾ ಅಕಾಡೆಮಿ ಇರುವುದೇ ಗೊತ್ತಿಲ್ಲ. ಬೆಂಗಳೂರಿನಲ್ಲಿ ಅಕಾಡೆಮಿಯ ಕಚೇರಿ ಇದೆ. ದೆಹಲಿ ಹೊರತುಪಡಿಸಿದರೆ ಕರ್ನಾಟಕದಲ್ಲಿ ಮಾತ್ರ ಶಿಲ್ಪಕಲಾ ಅಕಾಡೆಮಿ ಇರುವುದು ವಿಶೇಷ. ರಾಜ್ಯದ ಮೂಲೆ ಮೂಲೆಯಲ್ಲಿರುವ ಶಿಲ್ಪ ಕಲಾವಿದರನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸುವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ ಎಂದರು. ಶಿಲ್ಪಕಲೆಗೆ ಸಂಬಂಧಿಸಿದಂತೆ ಪ್ರತಿ ವರ್ಷ ಪುಸ್ತಕಗಳನ್ನು ಹೊರ ತರುವ ಕೆಲಸವನ್ನೂ ಮಾಡಲಾಗುತ್ತಿದೆ. ಶಿಲ್ಪಗಳನ್ನು ಸಂಗ್ರಹಿಸುವ ಕಾರ್ಯಕ್ಕೂ ಅಕಾಡೆಮಿ ಒತ್ತು ನೀಡುತ್ತದೆ. 50ಕ್ಕೂ ಹೆಚ್ಚು ಶಿಲ್ಪಗಳನ್ನು ಸಂಗ್ರಹಿಸಿ ಶಿಬಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ದಾವಣಗೆರೆ ಕಲಾ ಕಾಲೇಜಿನಲ್ಲಿ ಕಲಾವಿದರ ಶಿಬಿರ ನಡೆಸಲಾಗುವುದು. ಕಾಲೇಜಿಗೆ ಬೇಕಾದ ಎಲ್ಲ ಸಹಕಾರ ನೀಡಲು ಸಿದ್ಧರಿರುವುದಾಗಿ ಹೇಳಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಎಸ್. ಗೀತಾ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಚಿತ್ರಗಳನ್ನು ಬಿಡಿಸುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಚಿತ್ರಕಲೆ ರೂಢಿಸಿಕೊಂಡವರಿಗೆ ಉತ್ತಮ ಆಲೋಚನಾ ಶಕ್ತಿ ಇರುತ್ತದೆ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಬಿಡಿಸುವ ಚಿತ್ರಗಳಿಗೂ ಅಂಕಗಳಿರುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಚಿತ್ರಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ, ಹಿರಿಯ ಚಿತ್ರಕಲಾವಿದ ಶ್ರೀನಾಥ್ ಬಿದರೆ, ದೃಶ್ಯಕಲಾ ವಿವಿ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ. ಕುಮಾರ್ ಇದ್ದರು.