

ದಾವಣಗೆರೆ : ಕಲಾವಿದರು ಚಿತ್ರಕಲೆ ಮೂಲಕ ದೇಶದ ಸಂಸ್ಕೃತಿ ಬಿಂಬಿಸಲಿದ್ದು ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಶ್ರೀಶೈಲ ಎಜುಕೇಷನ್ ಟ್ರಸ್ಟ್ ಖಜಾಂಚಿ ಜಿ.ಎಸ್. ಅನಿತ್‌ಕುಮಾರ್ ಹೇಳಿದರು.
ದಾವಣಗೆರೆ ಚಿತ್ರಕಲಾ ಪರಿಷತ್ ಹಾಗೂ ಹಿಂದು ಯುವ ಶಕ್ತಿ ಸಂಘಟನೆ ಸಹಯೋಗದಲ್ಲಿ ನಗರದ ತೊಗಟವೀರ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವರ್ಣ ಗಣೇಶ’ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಮೂಲಕವೇ ಎಲ್ಲವೂ ಸಿದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಚಿತ್ರಕಲಾವಿದರು ಕುಂಚದ ಮೂಲಕ ಕಲೆಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಪರೂಪದ ಹಾಗೂ ಅದ್ಭುತ ಚಿತ್ರಕಲೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದೇಶ, ಭಾಷೆ ಹಾಗೂ ಸಂಸ್ಕೃತಿ ಮೀರಿದ ಚಿತ್ರಕಲೆಗಳು ಹೆಚ್ಚು ಪ್ರಚಾರ ಆಗಬೇಕು ಹಾಗೂ ಎಲ್ಲೆಡೆ ಪ್ರದರ್ಶನ ಕಾಣಬೇಕು. ಆ ಮೂಲಕ ಕಲಾವಿದರಿಗೆ ಉತ್ತೇಜನ ನೀಡಬೇಕು. ಪರಿಷತ್ ಚಿತ್ರಕಲಾ ಪ್ರದರ್ಶನ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು ಚಿತ್ರಕಲೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಚಿತ್ರಕಲೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದರು.
ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಸರ್ಕಾರ ದೇಶದ ಕಲೆ ಮತ್ತು ಸಂಸ್ಕೃತಿ ಉಳಿಸಲು ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.
ಪರಿಷತ್ ಅಧ್ಯಕ್ಷ ಸದಾನಂದ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಏರ್ಪಡಿಸಿರುವ ಚಿತ್ರಕಲಾ ಪ್ರದರ್ಶನವನ್ನು ಸೆ.27ರ ವರೆಗೆ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಸದಸ್ಯ ಪಿ.ಸಿ. ಮಹಾಬಲೇಶ್ವರ, ಚಿತ್ರಕಲಾ ಪರಿಷತ್ ಕಾರ್ಯದರ್ಶಿ ಡಿ. ಶೇಷಾಚಲ, ಕಲಾವಿದರಾದ ಶಾಂತಯ್ಯ ಪರಡಿಮಠ, ಪ್ರಶಾಂತ್, ಡಿ.ಕೆ. ಅಶೋಕ, ದತ್ತಾತ್ರೇಯ ಭಟ್, ಎಂ. ರೂಪಶ್ರೀ ಇತರರು ಇದ್ದರು. ಪಿ.ಸಿ. ಶ್ರೀನಿವಾಸ್ ನಿರೂಪಿಸಿದರು.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸುಮಾರು 25ಕ್ಕೂ ಹೆಚ್ಚು ಕಲಾವಿದರ ಕುಂಚದಿಂದ ಅರಳಿದ ಅಪರೂಪದ ಸುಂದರ ಗಣಪತಿ ಮೊದಲಾದ ಚಿತ್ರಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.