ಅಡಕೆ ಸಿಪ್ಪೆಯಿಂದ ಅಗರಬತ್ತಿ ತಯಾರಿಕೆಗೆ ಚಿಂತನೆ

DVG-DAMCOS-20.jpg
Published on

ದಾವಣಗೆರೆ :  ದಾಮ್‌ಕೋಸ್‌ನಿಂದ ಬರುವ ದಿನಗಳಲ್ಲಿ ಅಡಕೆ ಸಿಪ್ಪೆಯಿಂದ ಅಗರಬತ್ತಿ ಉದ್ಯಮ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ದಾಮ್‌ಕೋಸ್ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಹೇಳಿದರು.  ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ ರಜತ ಮಹೋತ್ಸವ ಸಮಾರೋಪದಲ್ಲಿ ಮಾತನಾಡಿದರು.  ಅಡಕೆ ಸಿಪ್ಪೆಯನ್ನು ಒಣಗಿಸಿ ಪೌಡರ್ ಮಾಡಿದರೆ ಅದರಿಂದ ಉಪಯುಕ್ತ ಊದುಬತ್ತಿ ತಯಾರಿಸಬಹುದಾಗಿದೆ. ಇದಕ್ಕಾಗಿ ಸಂಸ್ಥೆಯಿಂದ ಅಗರಬತ್ತಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಉದ್ಯಮ ಸ್ಥಾಪಿಸುವ ಮಹದಾಸೆಯಿದೆ ಎಂದು ತಿಳಿಸಿದರು.  ಪ್ರತಿದಿನ ಮನೆಗಳಲ್ಲಿ ಉಪಯೋಗಿಸುವ ಅಗರಬತ್ತಿಯನ್ನು ಕಲ್ಲಿದ್ದಲು ಚಾರ್‌ಕೋಲ್‌ನಿಂದ ತಯಾರಿಸಲಾಗುತ್ತಿದ್ದು, ಇದರಿಂದ ಬರುವ ಇಂಗಾಲ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರೆ, ಅಡಕೆ ಸಿಪ್ಪೆ ಪೌಡರ್ ಊದುಬತ್ತಿಯು ಸಹಜ ಪರಿಮಳ ಬೀರಲಿದೆ ಎಂದರು.  ಅಡಕೆ ಸಿಪ್ಪೆಯ ದ್ರವದಿಂದ ಸಾಬೂನು ತಯಾರಿಕೆ ಮಾಡಲಾಗಿದ್ದು, ಪುತ್ತೂರಿನಲ್ಲಿ ಸೋಪ್ ಕೈಗಾರಿಕೆ ಸ್ಥಾಪನೆ ಮಾಡಲಾಗಿದೆ. ದಾವಣಗೆರೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ರುಚಿಕರ ಅಡಕೆ ಉಪ್ಪಿನಕಾಯಿ ತಯಾರಿಸಿದ್ದರು ಎಂದು ಮಾಹಿತಿ ನೀಡಿದರು.  ಇತ್ತೀಚಿನ ದಿನಗಳಲ್ಲಿ ರೈತರು ಕೇವಲ ಅಡಕೆ ಬೆಳೆಯ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಉಪ ಉತ್ಪನ್ನಗಳ ತಯಾರಿಕೆ ಕುರಿತಂತೆ ಯಾರೂ ಆಲೋಚನೆ ಮಾಡುತ್ತಿಲ್ಲ. ಎಲ್ಲಿಯೇ ಉಪ ಉತ್ಪನ್ನಗಳು ತಯಾರಾದರೆ ಬೆಳೆಗಾರರು ಮೊದಲು ಖರೀದಿಸಿ ಪ್ರೋತ್ಸಾಯಿಸಬೇಕು ಎಂದು ತಿಳಿಸಿದರು.  ಸಂಘದ ಉಪಾಧ್ಯಕ್ಷ ಎಚ್.ಜಿ. ಮಲ್ಲಿಕಾರ್ಜುನ್, ನಿರ್ದೇಶಕರಾದ ಎಚ್.ಜಿ. ಮರುಳಸಿದ್ದಪ್ಪ, ಎಂ.ಆರ್. ಮಂಜುನಾಥಯ್ಯ, ಮುಖಂಡರಾದ ಗೋಪನಾಳ್ ಕರಿಬಸಪ್ಪ, ಮಳಲ್ಕೆರೆ ಬಸವರಾಜಪ್ಪ, ನಾಗರಾಜಪ್ಪ, ಶ್ರೀಹರಿ ಎಂ. ಗೌರಿಪುರ ಇತರರು ಇದ್ದರು.  ಬಾಕ್ಸ್...  ಯಶಸ್ವಿಯಾಗಿ ನಡೆದ ರಜತ ಮಹೋತ್ಸವ  ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ನಗರದಲ್ಲಿ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ಸಂಘದ 25ನೇ ಸರ್ವ ಸದಸ್ಯರ ಮಹಾಸಭೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ರೈತರು ಉತ್ಸಾಹದಿಂದ ಭಾಗವಹಿಸಿದ್ದರು.  ಕೃಷಿ ಯಂತ್ರ ಮೇಳ ರೈತರಿಗೆ ಬಹಳಷ್ಟು ಉಪಯುಕ್ತವಾಯಿತು. ಮೇಳಕ್ಕೆ ಭೇಟಿ ನೀಡಿದ ಅನ್ನದಾತರು ಯಂತ್ರೋಪಕರಣ ಹಾಗೂ ಸಾವಯವ ಗೊಬ್ಬರ, ಪೋಷಕಾಂಶ, ಜೈವಿಕ ಗೊಬ್ಬರ ಮತ್ತು ಕೀಟನಾಶಕಗಳ ಬಗ್ಗೆ ಮಾಹಿತಿ ಪಡೆದು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net