

ದಾವಣಗೆರೆ : ಲಕ್ಷಾಂತರ ರೂ. ಖರ್ಚು ಮಾಡಿ ಬೋರ್ವೆಲ್ ಕೊರೆಸಿದರೂ ನೀರು ಸಿಗದೆ ಅಸಹಾಯಕನಾದ ರೈತನೊಬ್ಬ ದಾವಣಗೆರೆ ತಾಲೂಕು ಮಾಯಕೊಂಡ ಹೋಬಳಿಯ ಹೊನ್ನನಾಯಕನ ಹಳ್ಳಿಯಲ್ಲಿ ಫಲಕ್ಕೆ ಬಂದಿದ್ದ ಎರಡೂವರೆ ಎಕರೆ ಅಡಕೆ ತೋಟವನ್ನು ಕಡಿಸಿ ಹಾಕಿದ್ದಾನೆ.
ಗ್ರಾಮದ ರೈತ ಬಸವರಾಜಪ್ಪ, ತನ್ನ ಒಂದೂವರೆ ಎಕರೆ ಅಡಕೆ ತೋಟದಲ್ಲಿ ಬೆಳೆದಿದ್ದ, ಫಲಕ್ಕೆ ಬಂದ ಸಾವಿರಾರು ಅಡಕೆ ಗಿಡಗಳಿಗೆ ನೀರು ಒದಗಿಸಲಾಗದೆ ಪರದಾಡುತ್ತಿದ್ದ. ತನ್ನ ಜಮೀನಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ 9 ಕೊಳವೆಬಾವಿ ಕೊರೆಸಿದರೂ ನೀರು ಬಿದ್ದಿರಲಿಲ್ಲ.
ಇನ್ನೊಂದು ವರ್ಷ ತೋಟ ಉಳಿಸಿದರೆ ಅಡಕೆ ಫಲ ನೀಡುತ್ತಿತ್ತು, ಆದರೆ ಅವುಗಳಿಗೆ ನೀರುಣಿಸಲಾಗದ ಅಸಹಾಯಕತೆ ಕಾಡುತ್ತಿತ್ತು. ಇದರಿಂದ ಬೇಸತ್ತ ರೈತ ಅಡಕೆ ಗಿಡಗಳನ್ನು ಕಡಿದು ಹಾಕಿದ್ದಾನೆ.
‘ಎರಡೂವರೆ ಎಕರೆ ತೋಟ ಮಾಡಿದ್ದೇನೆ. ಒಟ್ಟು 9 ಬೋರ್ ಹಾಕಿಸಿದೆ, ಒಂದರಲ್ಲೂ ನೀರು ಬರಲಿಲ್ಲ. 6 ಮೋಟಾರುಗಳಿವೆ, ಕೇಬಲ್, ಪೈಪ್ಗಾಗಿ 6-7 ಲಕ್ಷ ರೂ. ಸಾಲ ಮಾಡಿ ಪ್ರಯತ್ನಿಸಿದರೂ ನೀರು ಸಿಕ್ಕಿಲ್ಲ. ಕೊನೆಗೆ ಅನಿವಾರ್ಯವಾಗಿ ಗಿಡಗಳನ್ನು ಕಡಿಸಿದ್ದೇನೆ’ ಎಂದು ಬಸವರಾಜಪ್ಪ ತಿಳಿಸಿದ್ದು, ಸರ್ಕಾರದಿಂದ ಪರಿಹಾರ ನಿರೀಕ್ಷೆಯಲ್ಲಿದ್ದಾರೆ.