ಸಮಾಜಮುಖಿ ಯೋಜನೆಗೆ ಅರಸು ಮಾದರಿ

DVG-ARASU-20.jpg
Published on

ದಾವಣಗೆರೆ :  ರಾಜ್ಯದಲ್ಲಿ ಹಲವಾರು ಸಮಾಜಮುಖಿ ಯೋಜನೆ ಜಾರಿಗೊಳಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.  ಪ. ಜಾತಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರರಾದ ಅರಸು ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತ ನಡೆಸಿದ್ದಾರೆ. ಜೀತ ಪದ್ಧತಿ, ಮಲ ಹೊರುವ ಪದ್ಧತಿ ನಿರ್ಮೂಲನೆ ಯೋಜನೆ ಜಾರಿ ಮೂಲಕ ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದ್ದಾರೆ ಎಂದು ತಿಳಿಸಿದರು.  ಭೂ ಸುಧಾರಣಾ ಕಾಯ್ದೆ, ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸ್ಥಾಪನೆ ಸೇರಿ ಬಡವರು, ಶೋಷಿತರ ಏಳಿಗೆಗೆ ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹಿಂದುಳಿದ ವರ್ಗಗಳ ಸಮುದಾಯ, ವಿದ್ಯಾರ್ಥಿಗಳಿಗೆ ಹಲವಾರು ಯೋಜನೆ ರೂಪಿಸಿ ನೆರವು ನೀಡಲಾಗುತ್ತಿದೆ ಎಂದರು.  ವಿದ್ಯಾರ್ಥಿಗಳು ದೇಶದ ಮಹಾನ್ ನಾಯಕರ ಜೀವನ ಚರಿತ್ರೆ ಓದಬೇಕು. ಅವರ ಆದರ್ಶ ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ಕ್ಷೇತ್ರದಲ್ಲಿ ರೈತರು, ಮಹಿಳೆಯರು, ಹಿಂದುಳಿದ ವರ್ಗಗಳು, ಪ. ಜಾತಿ ಮತ್ತ ಪಂಗಡದವರ ಪರ ಕೆಲಸ ಮಾಡುವುದಾಗಿ ಹೇಳಿದರು.  ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಸೇರಿ ಹಲವಾರು ಕ್ರಾಂತಿಕಾರಿ ಯೋಜನೆ ಜಾರಿ ಮೂಲಕ ದೇವರಾಜ ಅರಸು ಆರ್ಥಿಕ ಹಾಗೂ ಸಾಮಾಜಿಕವಾಗಿ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದ್ದಾರೆ ಎಂದರು.  ದೇವರಾಜ ಅರಸು ರಾಜ್ಯದ ಸಮೃದ್ಧಿಗೆ ಅಡಿಪಾಯ ಹಾಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ. ಎಲ್ಲ ವರ್ಗದ ಜನರಿಗೂ ಐದು ಗ್ಯಾರಂಟಿ ಯೋಜನೆ ನೀಡಿದ್ದಾರೆ ಎಂದು ತಿಳಿಸಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಅರಸು ಅವರು ಅವರು ಜಾರಿಗೊಳಿಸಿದ ಸುಮಾರು ಅರ್ಧದಷ್ಟು ಯೋಜನೆಗಳನ್ನು ತಾಲೂಕು ಮತ್ತು ಜಿಲ್ಲಾಡಳಿತ ಇಂದಿಗೂ ನಿರ್ವಹಿಸುತ್ತಿವೆ. ಆರ್ಥಿಕ ಸಮಾನತೆ ತಂದ ದೇವರಾಜ ಅರಸು ಅವರು ಸಮಾಜದಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಹೇಳಿದರು.  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎಚ್. ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 8 ಹೊಸ ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಗುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಲಭ್ಯ ಒದಗಿಸಲು ಇಲಾಖೆ ಶ್ರಮಿಸಲಿದೆ ಎಂದರು.  ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕಲಮರಹಳ್ಳಿ ದೇವರಾಜ ಅರಸು ಕುರಿತು ಉಪನ್ಯಾಸ ನೀಡಿದರು. ಜಿಪಂ ಉಪ  ಕಾರ್ಯದರ್ಶಿ ಕೃಷ್ಣಾನಾಯ್ಕ, ದೂಡಾ ಆಯುಕ್ತ ಹುಲುಮನಿ ತಿಮ್ಮಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಇತರರು ಇದ್ದರು.  ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಳಾಖೆ, ಪಾಲಿಕೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net