

ದಾವಣಗೆರೆ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಜಿಲ್ಲಾದ್ಯಂತ ಗುರುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ನಗರದ ಕೆ.ಬಿ. ಬಡಾವಣೆ ಮತ್ತು ಪಿ.ಜೆ. ಬಡಾವಣೆ ರಾಯರ ಮಠಗಳಲ್ಲಿ, ಎರಡನೇ ಮಂತ್ರಾಲಯ ಎಂದು ಖ್ಯಾತಿಯಾದ ಹೊನ್ನಾಳಿ ರಾಯರ ಮಠ ಹಾಗೂ ಇತರ ತಾಲೂಕುಗಳಲ್ಲೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
...
* ಕೆ.ಬಿ. ಬಡಾವಣೆ ರಾಯರ ಮಠ
ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಫಲ ಪಂಚಾಮೃತ, ಶ್ರೀ ಹರಿವಾಯು ಸ್ತುತಿ ಪಾರಾಯಣ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ, ಸತ್ಯನಾರಾಯಣ ಪೂಜೆ, ಪಾದಪೂಜೆ ನೆರವೇರಿದವು.
ನಂತರದ ಬೆಂಗಳೂರಿನ ಸಂದೇಶಾಚಾರ್, ಹರಿಹರದ ಸುರೇಶಾಚಾರ್, ಪ್ರಭಾಕರ್ ಅವರು ರಾಯರ ಕುರಿತು ಉಪನ್ಯಾಸ ನೀಡಿದರು. ನಂತರ ಮಹಾ ನೈವೇದ್ಯ, ಮಂಗಳಾರತಿ, ತೀರ್ಥ ಪ್ರಸಾದಗಳು ನಡೆದವು.
ಸಂಜೆ ದೀವುಟಗಿ ಸೇವೆ, ಮಠದ ಪ್ರಾಕಾರದಲ್ಲಿ ರಥೋತ್ಸವ, ಅಷ್ಟಾವಧಾನ, ಮಹಾ ಮಂಗಳಾರತಿ ನೆರವೇರಿದವು. ನಮನ ಅಕಾಡೆಮಿಯ ಮಾಧವಿ ಡಿ.ಕೆ. ಮತ್ತು ತಂಡದವರು ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಮಠದ ಅಧ್ಯಕ್ಷ ಕೊ.ಸ. ಪ್ರಸನ್ನಾಚಾರ್, ನರಗನಹಳ್ಳಿ ಸುಬ್ರಹ್ಮಣ್ಯ, ವಾಗೀಶಾಚಾರ್, ವಾಚಸ್ಪತಿ ಆಚಾರ್, ಕಡೂರು ಪ್ರಾಣೇಶಾಚಾರ್, ಸಿ.ಕೆ. ಆನಂದ ತೀರ್ಥಾಚಾರ್, ಕಂಪ್ಲಿ ಗುರುರಾಜಾಚಾರ್ ಪಾಲ್ಗೊಂಡಿದ್ದರು.
...
* ಪಿ.ಜೆ. ಬಡಾವಣೆ ಮಠ
ಪೂರ್ವಾರಾಧನೆ ಅಂಗವಾಗಿ ನಗರದ ಪಿ.ಜೆ. ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ, ಪುಷ್ಪಾಲಂಕಾರ ಹಾಗೂ ಅಷ್ಟೋತ್ತರ ಪಾರಾಯಣ, ಪಂಡಿತ ಗೋಪಾಲಾಚಾರ್ಯ ಮಣ್ಣೂರ್ ಮತ್ತು ಪಂಡಿತ ಪುರಂದರಾಚಾರ್ ಹಯಗ್ರೀವ ಅವರಿಂದ ಪ್ರವಚನ ನಡೆಯಿತು.
ರಾಯರ ವೃಂದಾವನಕ್ಕೆ ಮಹಾ ಮಂಗಳಾರತಿ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ನಂತರ ಭಕ್ತರಿಗೆ ಮಠದ ಆವರಣದಲ್ಲಿ ತೀರ್ಥಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ಪಲ್ಲಕ್ಕಿ ಉತ್ಸವ, ಸ್ವಸ್ತಿವಾಚನ, ಮಹಾ ಮಂಗಳಾರತಿ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು. ಶ್ರೀ ಮಠದ ಸಂಸ್ಥಾಪಕ ಸುತೀರ್ಥ ಕಟ್ಟಿ ಹಾಗೂ ರಾಮಗೋಪಾಲ್ ಕಟ್ಟಿ ನೇತೃತ್ವದಲ್ಲಿ ಎಲ್ಲ ಸೇವೆಗಳು ನೆರವೇರಿದವು.
ಎಸ್.ಎಸ್. ಕೇರ್ ಟ್ರಸ್ಟ್‌ನ ಪ್ರಭಾ ಮಲ್ಲಿಕಾರ್ಜುನ್ ಮಠಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದರು.