ಆದರ್ಶ ಪಾಲನೆಯಿಂದ ಬದುಕು ಹಸನು

dvg-hadapada-appanna.jpg
Published on

ದಾವಣಗೆರೆ : ಶಿವಶರಣ ಹಡಪದ ಅಪ್ಪಣ್ಣ ಅವರ ತತ್ವಾದರ್ಶ ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್ ಹೇಳಿದರು.  ಜಿಲ್ಲಾಡಳಿತ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.  ಬಸವಣ್ಣ ಅವರ ಜನಪರ ಕಾಳಜಿ ಮತ್ತು ಜನರನ್ನು ತಿದ್ದುವಂತಹ ಆದರ್ಶಗಳನ್ನು ಅಳವಡಿಸಿಕೊಂಡ ಹಡಪದ ಅಪ್ಪಣ್ಣ ಅವರು ನಮಗೆಲ್ಲ ಆದರ್ಶಪ್ರಾಯರು ಎಂದು ತಿಳಿಸಿದರು.  ತಮ್ಮದೇ ಆದ ಸಾಮಾಜಿಕ ಕ್ರಾಂತಿಯ ಮೂಲಕ ಅನೇಕ ಬದಲಾವಣೆಗಳನ್ನು ತಂದವರು ಅಪ್ಪಣ್ಣ. 12ನೇ ಶತಮಾನದಲ್ಲಿ ಹಡಪದ ಸಮಾಜದವರು ಬೆಳಗ್ಗೆ ಎದುರು ಬಂದರೆ ಏನೋ ಅನಾಹುತವಾಗುತ್ತದೆ ಎಂಬ ಮೂಢನಂಬಿಕೆ ಇತ್ತು. ಇದನ್ನು ಹೋಗಲಾಡಿಸಲು ಬಸವಣ್ಣ ಅವರು, ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣ ಅವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ ಎಂದರು.  ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಸಾರುವುದರೊಂದಿಗೆ ಹಲವಾರು ವಚನಗಳನ್ನು ಬರೆದ ಕೀರ್ತಿ ಹಡಪದ ಅಣ್ಣ ಅವರಿಗೆ ಸಲ್ಲುತ್ತದೆ. ಜ್ಞಾನ, ಭಕ್ತಿ ಮತ್ತು ಕಾಯಕ ಮಾರ್ಗದಿಂದ ಅಪ್ಪಣ್ಣ ಅವರು ದೇವರಾದರು. ಇದೇ ರೀತಿ ನಾವು ದೇವರನ್ನು ಕಾಣುವ ಮಾರ್ಗವನ್ನು ಕಂಡುಕೊಳ್ಳಬೇಕು. ಒಳ್ಳೆಯದೆಲ್ಲವೂ ದೇವರ ಸಮಾನ. ಆದ್ದರಿಂದ ನಾವು ಒಳ್ಳೆಯದನ್ನು ಆಯ್ಕೆ ಮಾಡಬೇಕು. ವಚನಗಳನ್ನು ಓದಿ, ಅರ್ಥೈಸಿಕೊಂಡು ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.  ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಸದಸ್ಯೆ ವಾಣಿ ಬಕ್ಕೇಶ್, ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಬಸಾಪುರದ  ಶಶಿಧರ್, ಬಲ್ಲೂರು ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net