

ದಾವಣಗೆರೆ: ಏಕರೂಪದ ಮಾರುಕಟ್ಟೆ ಶುಲ್ಕ ಜಾರಿಗೆ ತರುವಂತೆ ಆಗ್ರಹಿಸಿ ದಾವಣಗೆರೆ ಎಪಿಎಂಸಿ ಯಾರ್ಡ್‌ನ ದಲ್ಲಾಲರ ಸಂಘದಿಂದ ಸೋಮವಾರ ಅನಿರ್ದಿಷ್ಟಾವಧಿಯ ಮುಷ್ಕರ ಪ್ರಾರಂಭವಾಗಿದೆ.
ಟೆಂಡರ್ ಪ್ರಕ್ರಿಯೆಯಿಂದ ದೂರ ಉಳಿಯುವ ಮೂಲಕ ದಲ್ಲಾಲರು ಮುಷ್ಕರದಲ್ಲಿ ಪಾಲ್ಗೊಂಡರು. ನಂತರ ಈ ಕುರಿತು ಎಪಿಎಂಸಿ ಕಾರ್ಯದರ್ಶಿ ಪ್ರಭು, ಸಹಾಯಕ ನಿರ್ದೇಶಕ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸರ್ಕಾರ ಶೇ.1ರಷ್ಟು ಮಾರುಕಟ್ಟೆ ಶುಲ್ಕ ವಿಧಿಸುವ ಮೂಲಕ ವರ್ತಕರ ಬಹು ವರ್ಷಗಳ ಬೇಡಿಕೆ ಈಡೇರಿಸಿದೆ. ಆದರೆ ಎಪಿಎಂಸಿ ಪ್ರಾಂಗಣದ ಹೊರಗೆ ಕೃಷಿ ಉತ್ಪನ್ನ ವ್ಯವಹಾರ ಮಾಡುವವರಿಗೆ ಎಪಿಎಂಸಿ ಶುಲ್ಕ ಇರುವುದಿಲ್ಲ ಎನ್ನುವ ಅಂಶ ನ್ಯಾಯಯುತವಾಗಿ ವ್ಯವಹಾರ ನಡೆಸುವ ನಮಗೆ ನಿರಾಸೆ ಮೂಡಿಸಿದೆ ಎಂದು ದಲ್ಲಾಲರು ಹೇಳಿದರು.
ಕಾನೂನು, ನಿಯಮಗಳು ಎಲ್ಲರಿಗೂ ಒಂದೇ ಇರಬೇಕು ಎನ್ನುವುದು ಸಂವಿಧಾನ ಬದ್ಧವಾಗಿದೆ. ಪ್ರಾಂಗಣದಲ್ಲಿಯ ವರ್ತಕರು, ಪ್ರಾಂಗಣದ ಹೊರಗಿನ ವರ್ತಕರೊಂದಿಗೆ ಪೈಪೋಟಿ ನಡೆಸಲಾಗದೇ ವಹಿವಾಟು ಸ್ಥಗಿತಗೊಳಿಸುವ ಸ್ಥಿತಿ ಬಂದಿದೆ.
ಪ್ರಾಂಗಣದಲ್ಲಿ ಈಗಾಗಲೇ ಮೂಲಸೌಕರ್ಯಗಳನ್ನು ಒದಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು, ಕಾಯ್ದೆ ತಿದ್ದುಪಡಿಯಿಂದ ಗುಮಾಸ್ತರು ಹಾಗೂ ಹಮಾಲರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಪ್ರಾಂಗಣದಲ್ಲಿ ಗೋದಾಮು, ಮಳಿಗೆಗಳನ್ನು ನಿರ್ಮಿಸಲು ಸಾಲ ಪಡೆದು ಬಂಡವಾಳ ಹೂಡಿದ್ದು ಮರುಪಾವತಿ ಮಾಡಲು ಈ ಕಾಯ್ದೆಯಿಂದ ತುಂಬಾ ತೊಂದರೆಯಾಗಿದೆ. ಆದ್ದರಿಂದ ನಾವೂ ಸಹ ಪ್ರಾಂಗಣದಲ್ಲಿನ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಅನಿವಾರ್ಯವಾಗಿ ಪ್ರಾಂಗಣದ ಹೊರಗೆ ಹೋಗಬೇಕಾಗಿರುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕದೇ ಯಾರೋ ಒಬ್ಬರು ನಿಗದಿಪಡಿಸಿದ ಕನಿಷ್ಠ ಬೆಲೆ ದೊರೆಯುತ್ತದೆ, ಇದರಿಂದ ಸರ್ಕಾರಕ್ಕೂ ನಷ್ಟ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಜಿ.ಎಸ್.ಪರಮೇಶ್ವರ ಗೌಡರು, ಕಾರ್ಯದರ್ಶಿ ಬಿ.ಎನ್.ಟಿ.ಸದಾನಂದ್, ದೊಗ್ಗಳ್ಳಿ ಬಸವರಾಜ್, ಕೆ.ಜಿ.ಕೆ.ರಾಜಣ್ಣ, ಕುಸುಮಾಶೆಟ್ರು, ನಂದಿ ಬಸಣ್ಣ, ಆರ್.ಎಚ್.ಜಯಣ್ಣ, ಶಂಕರಪ್ಪ ಇದ್ದರು.