

ದಾವಣಗೆರೆ : ದಾವಣಗೆರೆ ಮೂಲದ ಇಂಜಿನಿಯರ್ ದಂಪತಿ ಮತ್ತು ಮಗು ಅಮೆರಿಕದಲ್ಲಿ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.
ಯೋಗೇಶ್ ಹೊನ್ನಾಳ್(37), ಪ್ರತಿಭಾ ಹೊನ್ನಾಳ್(35), ಯಶ್ ಹೊನ್ನಾಳ್(6) ಮೃತಪಟ್ಟವರು. ಜಿಲ್ಲೆಯ ಜಗಳೂರು ತಾಲೂಕು ಹಾಲೇಕಲ್ಲು ಗ್ರಾಮದವರಾದ ಯೋಗೇಶ್ ಮತ್ತು ಬೆಂಗಳೂರಿನವರಾದ ಪ್ರತಿಭಾ 9 ವರ್ಷಗಳ ಹಿಂದೆ ಮದುವೆಯಾಗಿದ್ದರು.
ಮದುವೆಯ ನಂತರ ಅವರು ಅಮೆರಿಕದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಪುತ್ರ ಯಶ್ ನರ್ಸರಿ ಶಾಲೆಯಲ್ಲಿ ಓದುತ್ತಿದ್ದ.
ಎರಡು ದಿನಗಳಿಂದ ಮನೆಯಿಂದ ಯಾರೂ ಹೊರಗೆ ಬಾರದಿರುವುದನ್ನು ಗಮನಿಸಿದ ನೆರೆಹೊರೆಯವರು ಶುಕ್ರವಾರ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊದಲು ಪೊಲೀಸರು ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದ್ದಾರೆ. ನಂತರ ಮನೆ ಬಳಿ ಬಂದು ಗಮನಿಸಿದಾಗ ಮೂವರೂ ಮೃತಪಟ್ಟಿರುವುದು ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಅಲ್ಲಿನ ಪೊಲೀಸರು ತಕ್ಷಣ ಬೆಂಗಳೂರಿನಲ್ಲಿದ್ದ ಯೋಗೇಶ್ ಅವರ ಸಹೋದರನಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಯೋಗೇಶ್ ತಾಯಿ ಶೋಭಾ ದಾವಣಗೆರೆಯ ವಿದ್ಯಾನಗರದಲ್ಲಿ, ಪ್ರತಿಭಾ ಅವರ ತಂದೆ ಅಮರ್‌ನಾಥ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈ ವಿಷಯ ಕೇಳಿ ಕುಟುಂಬ ವರ್ಗದವರಿಗೆ ಬರಸಿಡಿಲು ಬಡಿದಂತಾಗಿದೆ.
...
* ತಾಯಿಯ ಮನವಿ
ಮೃತದೇಹಗಳನ್ನು ಭಾರತಕ್ಕೆ ತರಿಸಿಕೊಡಬೇಕು. ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಯೋಗೇಶ್ ಅವರ ತಾಯಿ ಶೋಭಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.
ಅಲ್ಲಿ ಏನಾಯಿತು, ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಬಹಳ ದೂರದಲ್ಲಿ ಇರುವುದರಿಂದ ಸರ್ಕಾರಗಳು ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.
ಜಿಲ್ಲಾಡಳಿತದಿಂದ ಅಮೆರಿಕದ ರಾಯಭಾರ ಕಚೇರಿಗೆ ಇಮೇಲ್ ಸಂದೇಶ ಕಳಿಸಿದ್ದೇವೆ. ವಿದೇಶಾಂಗ ಸಚಿವಾಲಯಕ್ಕೂ ಮಾಹಿತಿ ನೀಡಿದ್ದೇವೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
...
* ವಾರದ ಹಿಂದೆ ಮಾತನಾಡಿದ್ದರು
ಮಗ ಯೋಗೇಶ್ ಒಂದು ವಾರದ ಹಿಂದೆ ಕರೆ ಮಾಡಿ ಮಾತನಾಡಿದ್ದ. ಕ್ಷೇಮವಾಗಿದ್ದೇವೆ ಎಂದು ತಿಳಿಸಿದ್ದ. ಸಾಧ್ಯವಾದರೆ ಡಿಸೆಂಬರ್‌ನಲ್ಲಿ ಬರುವುದಾಗಿಯೂ ಹೇಳಿದ್ದ ಎಂದು ತಾಯಿ ಶೋಭಾ ಸುದ್ದಿಗಾರರಿಗೆ ತಿಳಿಸಿದರು.
ಜೀವನದಲ್ಲಿ ಬಹಳ ಕಷ್ಟಪಟ್ಟು ಮುಂದೆ ಬಂದಿದ್ದ. ಏಕೆ ಹೀಗಾಯಿತೋ ತಿಳಿಯುತ್ತಿಲ್ಲ ಎಂದು ದುಃಖಿಸಿದರು.