ಹಳೆಯ ವಿದ್ಯಾರ್ಥಿಗಳ ಸಮ್ಮಿಲನ

IMG-20241019-WA0119.jpg
Published on

ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ ಬಯೋ-ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಕಟ್ಟಡ ನವೀಕರಣದ ಸಮಾಲೋಚನಾ ಕಾರ್ಯಕ್ರಮವನ್ನು ಭಾನುವಾರ, ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಸಂಕೇತ್ ರಾಮಕೃಷ್ಣ ಮೂರ್ತಿ ತಿಳಿಸಿದರು.  ಭಾನುವಾರ ಬೆಳಗ್ಗೆ 10 ಗಂಟೆಗೆ ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಯು.ಎಸ್. ಮಹಾಬಲೇಶ್, ಪ್ರೊ.ಬಕ್ಕಪ್ಪ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಶಿವಗಂಗೋತ್ರಿ ಆವರಣದಲ್ಲಿ 1998ರಿಂದ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರವಿದ್ದು, ಎಂಬಿಎ, ಕಾಮರ್ಸ್, ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ ಮತ್ತು ಎಕನಾಮಿಕ್ಸ್ ಬೋಧಿಸಲಾಗುತ್ತಿತ್ತು. ವರ್ಷಗಳು ಉರುಳಿದಂತೆ ಈ ಕಟ್ಟಡ ಶಿಥಿಲವಾಗುತ್ತಿದ್ದು, ಹಳೆಯ ವಿದ್ಯಾರ್ಥಿಗಳಿಂದ ಜ್ಞಾನ ದೇಗುಲದ ಜೀರ್ಣೋದ್ಧಾರ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.  ಜೀವ ವಿಜ್ಞಾನ ಅಧ್ಯಯನ ಕಟ್ಟಡಕ್ಕೆ ಹೊಸ ಸ್ವರೂಪ ನೀಡಲು ಪ್ರಯತ್ನ ಆರಂಭಿಸಿ ಈಗಾಗಲೇ 7.5 ಲಕ್ಷ ರೂ. ಸಂಗ್ರಹಿಸಲಾಗಿದೆ. ಕೇಂದ್ರದ ಎಲ್ಲ ಕೊಠಡಿಗಳ ಪೇಂಟಿಂಗ್ ಕಾರ್ಯ ಕೈಗೊಳ್ಳಲಾಗಿದ್ದು, ನಂತರ ಮೇಲ್ಚಾವಣಿ ಸೇರಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ನಡೆಲಾಗುವುದು ಎಂದು ಹೇಳಿದರು.  ಎರಡು ದಶಕಗಳ ಹಿಂದೆ ಇಲ್ಲಿ ವ್ಯಾಸಂಗ ಮಾಡಿ ದೇಶ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ 400ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದಾರೆ. ಇಂತಹ ಮಹತ್ಕಾರ್ಯವು ಎಲ್ಲರಿಗೂ ಪ್ರೇರಣೆ ಆಗಬೇಕು ಎಂದು ತಿಳಿಸಿದರು.  ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿವೃತ್ತ ನಿರ್ದೇಶಕ ಡಾ.ರಾಜ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net