

ದಾವಣಗೆರೆ : ಮಹಿಳೆ ಭ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾಳೆ ಎಂದು ಎಐಎಂಎಸ್‌ಎಸ್ ರಾಜ್ಯ ಸೆಕ್ರೆಟರಿಯೆಟ್ ಸದ್ಯಸ್ಯೆ ಅನುರಾಧಾ ಆತಂಕ ವ್ಯಕ್ತಪಡಿಸಿದರು. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಹಾಗೂ ಎಐಯುಟಿಯುಸಿ ವತಿಯಿಂದ ನಗರದ ಜಯದೇವ ವೃತದ ಬಳಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇವತ್ತಿಗೂ ಸ್ತ್ರೀ ಭ್ರೂಣಹತ್ಯೆ, ವರದಕ್ಷಿಣೆ ಕೊಲೆ, ಮರ್ಯಾದೆ ಹತ್ಯೆ, ಲೈಂಗಿಕ ದೌರ್ಜನ್ಯ, ಆ್ಯಸಿಡ್ ದಾಳಿ ನಡೆಯುತ್ತಿವೆ. ಹಾಗಾಗಿ ಇದು ಸಂಭ್ರಮದ ಆಚರಣೆಯ ದಿನವಲ್ಲ, ಮಹಿಳೆಯರ ಮೇಲೆ ದಿನನಿತ್ಯ ನಡೆಯುತ್ತಿರುವ ವಿವಿಧ ರೀತಿಯ ಅಗೌರವ, ದೌರ್ಜನ್ಯಗಳಿಗೆ ಕೊನೆ ಹಾಡಲು ಪಣ ತೊಡುವ ದಿನ ಎಂದು ಹೇಳಿದರು. ಪತ್ರಕರ್ತ ಸಿದ್ದಯ್ಯ ಹಿರೇಮಠ ಮಾತನಾಡಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಗತಿಯ ಕಾರಣದಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಪುರುಷ ಪ್ರಧಾನ ಧೋರಣೆ ಮತ್ತು ಮಹಿಳೆಯನ್ನು ಭೋಗದ ವಸ್ತುವನ್ನಾಗಿ ಬಿಂಬಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ. ಹೆಚ್ಚಾಗಿ ಜ್ಞಾನದ ಕ್ಷೇತ್ರಕ್ಕೆ ತೆರೆದುಕೊಳ್ಳಬೇಕು, ಅದರಿಂದ ಮಾತ್ರ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಪ್ರಶ್ನಿಸಲು ಸಾಧ್ಯ ಎಂದರು. ಮೊಬೈಲ್ ಬಳಕೆಯಿಂದ ಸಾಮಾಜಿಕ ಸಂಬಂಧವು ಮೊಟಕಗೊಂಡಿದೆ. ಈ ನಿಟ್ಟಿನಲ್ಲಿ ಪರಸ್ಪರ ಪ್ರೀತಿ, ವಾತ್ಸಲ್ಯದಿಂದ ಜನರನ್ನು ಕಾಣಬೇಕು ಎಂದು ಕಿವಿಮಾತು ಹೇಳಿದರು. ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳ ಮಾತನಾಡಿ, ಇಂದು ಮಹಿಳೆ ಒಂದೆಡೆ ಪುರುಷ ಪ್ರಧಾನ ಧೋರಣೆಗೆ ತುತ್ತಾಗುತ್ತಿದ್ದರೆ, ಇನ್ನೊಂದೆಡೆ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಶೋಷಣೆಯಿಂದ ತತ್ತರಿಸಿದ್ದಾಳೆ. ದೇಶದ ಆರ್ಥಿಕತೆಯಲ್ಲಿ ಶೇ. 93 ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕನಿಷ್ಠ ಜೀವನ ಭದ್ರತೆಯಿಲ್ಲ ಎಂದರು. ಎಐಎಂಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷೆ ಬನಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಭಾರತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಹಳ್ಳಿ ಹಾಗೂ ಬಡಾವಣೆಗಳ ಮಹಿಳೆಯರು ಭಾಗವಹಿಸಿದ್ದರು.