ಕೃತಕ ಅಭಾವ ಸೃಷ್ಟಿಸುವುದು ಬೇಡ

agri.jpg
Published on

ದಾವಣಗೆರೆ: ಕೃಷಿ ಪರಿಕರ ಮಾರಾಟಗಾರರು ಕೃತಕ ಅಭಾವವನ್ನು ಸೃಷ್ಟಿಸಬಾರದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಎಚ್ಚರಿಕೆ ನೀಡಿದರು.
 ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಗುರುವಾರ, ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ದಾಸ್ತಾನು ಮತ್ತು ವಿತರಣೆ ಕುರಿತು ಇಲಾಖೆಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಎಲ್ಲ ವ್ಯವಹಾರವನ್ನು ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಎಂಆರ್‌ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ಅಂಗಡಿಯಲ್ಲಿ ದಾಸ್ತಾನು ಎಷ್ಟಿದೆ ಎನ್ನುವ ಮಾಹಿತಿಯನ್ನು ಫಲಕದಲ್ಲಿ ನಮೂದಿಸಬೇಕು. ಕೈಚೀಟಿ ವ್ಯವಹಾರ ಮಾಡದೆ ಬಿಲ್‌ಗಳನ್ನು ನಿರ್ವಹಣೆ ಮಾಡಬೇಕು ಎಂದು ತಾಕೀತು ಮಾಡಿದರು.
 ಕಳಪೆ ಬೀಜ, ಇನ್ನಿತರ ಪರಿಕರಗಳನ್ನು ಮಾರಾಟ ಮಾಡಬಾರದು. ಅವುಗಳನ್ನು ಅಧಿಕೃತ ಕಂಪನಿಗಳಿಂದಲೇ ಖರೀದಿಸಬೇಕು. ರೈತರ ಪರವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
 ಮಾರಾಟಗಾರರಿಗೆ ನೀಡಿರುವ ಲೈಸೆನ್ಸ್ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಸಲ್ಫರ್ ಅಂಶವನ್ನು ಒಳಗೊಂಡ ಉತ್ಪನ್ನಗಳ ದಾಸ್ತಾನು ಪುಸ್ತಕವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಿಗಿಯಾದ ಕಾನೂನುಗಳನ್ನು ರೂಪಿಸಿದೆ ಎಂದು ಹೇಳಿದರು.
 ಒಟ್ಟಾರೆ ಕೃಷಿ ಪರಿಕರ ಮಾರಾಟಗಾರರು ಇಲಾಖೆಯೊಂದಿಗೆ ಕೈಜೋಡಿಸಿ ಗುಣಮಟ್ಟದ ಉತ್ಪನ್ನಗಳನ್ನು ಕೊಡುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಬೇಕು ಎಂದು ತಿಳಿಸಿದರು.
 ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಕಡಿಮೆ ಲಾಭದಲ್ಲಿ ವ್ಯಾಪಾರ ಮಾಡುವ ಪರಿಸ್ಥಿತಿಯಿದೆ. ಒಂದು ಅರ್ಥದಲ್ಲಿ ರೈತರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
 ಪರಿಕರಗಳಿಗೆ ಎಂಆರ್‌ಪಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ ಅವರು, ಕೃಷಿ ಪರಿಕರ ಮಾರಾಟಗಾರರು ಕಾನೂನು ಪಾಲನೆ ಮಾಡಬೇಕು. ಆರ್ಥಿಕವಾಗಿ ಲಾಭ ಪಡೆಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
 ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳಿಂದ ಉತ್ತಮ ಸಹಕಾರ ಸಿಕ್ಕಿದ್ದು ನಾವೂ ಅವರ ಜತೆಗೆ ನಿಲ್ಲಬೇಕು. ಮುಂಗಾರು ಹಂಗಾಮಿಗೆ ನಾವೆಲ್ಲ ಸಿದ್ಧರಾಗಬೇಕಿದೆ ಎಂದು ಕರೆ ಕೊಟ್ಟರು.
 ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ, ಉಮಾಪತಯ್ಯ, ಅಣಬೇರು ಗಂಗಣ್ಣ, ಶಿವಣ್ಣ, ಕರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net