

ರಮೇಶ ಜಹಗೀರದಾರ್ ದಾವಣಗೆರೆ : ಮಳೆಯಾಶ್ರಿತ ರೈತರ ಜೀವನ ಮಟ್ಟವನ್ನು ಉತ್ತಮಪಡಿಸುವ ಉದ್ದೇಶದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕೃಷಿ ಭಾಗ್ಯ’ ಯೋಜನೆಯಡಿ ದಾವಣಗೆರೆ ತಾಲೂಕಿನಲ್ಲಿ ಕಳೆದ ವರ್ಷ ನಿರ್ಮಿಸಲಾದ 82 ಕೃಷಿ ಹೊಂಡಗಳು ಮುಂಗಾರು ಮಳೆಗೆ ಮೈದುಂಬಿಕೊಂಡು ಜಲಪಾತ್ರೆಗಳಂತೆ ಕಂಗೊಳಿಸುತ್ತಿವೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 2023-24ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಲಾಯಿತು. ಅದರಂತೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಯಿತು. ತಾಲೂಕಿನ ಆನಗೋಡು ಗ್ರಾಮದಲ್ಲಿ 2023 ರ ಫೆಬ್ರವರಿಯಲ್ಲಿ ಕೃಷಿಹೊಂಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವ ಮೂಲಕ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಯೋಜನೆಗೆ ಚಾಲನೆ ನೀಡಿದರು. ರೈತರಿಂದ ಅರ್ಜಿಗಳು ಗುರಿ ಮೀರಿದ ಸಂಖ್ಯೆಯಲ್ಲಿ ಬಂದಿದ್ದರಿಂದ ಆನಗೋಡು ಹೋಬಳಿಯಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ... (ಬಾಕ್ಸ್) ಮಳೆ ನೀರು ಸಂಗ್ರಹ ಕೃಷಿ ಹೊಂಡಗಳ ಆಳ 10 ಮೀಟರ್ ಇದೆ. ಉದ್ದ ಮತ್ತು ಅಗಲದಲ್ಲಿ ವ್ಯತ್ಯಾಸವಿದೆ. ಸಣ್ಣ ಹೊಂಡಗಳು 10 ಮೀಟರ್, ಅದಕ್ಕಿಂತ ದೊಡ್ಡವು 12 ಮೀಟರ್, 18 ಮೀಟರ್ ಹಾಗೂ 21 ಮೀಟರ್ ಉದ್ದಗಲವನ್ನು ಹೊಂದಿವೆ. ಸುತ್ತಮುತ್ತ 5 ಎಕರೆ ಪ್ರದೇಶದಲ್ಲಿ ಬೀಳುವ ಮಳೆ ನೀರು ಹರಿದು ಬರುವ ರೀತಿಯಲ್ಲಿ ತಗ್ಗು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನೀರಿನ ಒಳ ಹರಿವು ಮತ್ತು ಹೊರ ಹರಿವಿಗೆ ವ್ಯವಸ್ಥೆ ಮಾಡಲಾಗಿದೆ. ಕೃಷಿ ಹೊಂಡಗಳ ಬಳಿ ಸೂಚನಾ ಫಲಕವನ್ನು ಹಾಕಲಾಗಿದ್ದು, ಭೂ ಮಾಲೀಕರನ್ನು ಹೊರತುಪಡಿಸಿ ಇತರರಿಗೆ ಪ್ರವೇಶವಿಲ್ಲ ಎಂದು ಬರೆಯಲಾಗಿದೆ. ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಆಗಿರುವ ಸಾಧನೆಯನ್ನು ಗಮನಿಸಿರುವ ಇಲಾಖೆಯ ಹಿರಿಯ ಅಧಿಕಾರಿಗಳು ಇತರ ಜಿಲ್ಲೆಗಳಲ್ಲೂ ಈ ಮಾದರಿಯ ಕೆಲಸಗಳಾಗಲಿ ಎಂದು ಉದಾಹರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ... ಮುಖ್ಯಾಂಶಗಳು * ಕಸಬಾ- 16, ಆನಗೋಡು - 38, ಮಾಯಕೊಂಡ - 26 ಕೃಷಿ ಹೊಂಡ ನಿರ್ಮಾಣ * ಕ್ಷೇತ್ರ ಬದು ನಿರ್ಮಾಣ, ಪಾಲಿಥೀನ್ ಹೊದಿಕೆ, ತಂತಿ ಬೇಲಿ, ಪಂಪ್‌ಸೆಟ್, ಸ್ಪ್ರಿಂಕ್ಲರ್ ಸೌಲಭ್ಯ * ಕೆ-ಕಿಸಾನ್ ಪೋರ್ಟಲ್‌ನಲ್ಲಿ ಫೋಟೋ ಅಪ್‌ಲೋಡ್ ಕಡ್ಡಾಯ * ಒಬ್ಬ ರೈತನಿಗೆ ಗರಿಷ್ಠ 1 ಲಕ್ಷ ರೂ. ವರೆಗೆ ಸಬ್ಸಿಡಿ