ಯಾಂತ್ರೀಕೃತ ಭತ್ತ ನಾಟಿಯಿಂದ ಇಳುವರಿ ಹೆಚ್ಚಳ

myk.jpg
Published on

ಮಾಯಕೊಂಡ : ಯಾಂತ್ರೀಕೃತ ಭತ್ತ ನಾಟಿ ಪದ್ಧತಿ ಅಳವಡಿಕೆಯಿಂದ ರೈತರು ಶೇ. 20ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್ ಮೂರ್ತಿ ತಿಳಿಸಿದರು.  ತಾಲೂಕಿನ ಬುಳ್ಳಾಪುರ ಕ್ಯಾಂಪ್‌ನ ರೈತ ಸುರೇಶ್ ಚಕೂರಿ ಫಾರಂನಲ್ಲಿ ಶನಿವಾರ ಯಾಂತ್ರೀಕೃತ ಭತ್ತ ನಾಟಿ ಪದ್ಧತಿ ವೀಕ್ಷಣೆ ಮಾಡಿ, ಅಧ್ಯಯನಕ್ಕೆ ಬಂದ ಚಿಕ್ಕಮಗಳೂರು ಜಿಲ್ಲೆಯ ರೈತರು ಹಾಗೂ ಅಧಿಕಾರಿಗಳ ತಂಡದೊಂದಿಗೆ ಅವರು ಮಾತನಾಡಿದರು.  ದಾವಣಗೆರೆ ಸೇರಿ ರಾಜ್ಯದ ಎಲ್ಲ್ಲ ಜಿಲ್ಲೆಗಳಲ್ಲಿ ಯಂತ್ರದ ಮೂಲಕ ನಾಟಿ ಮಾಡಲಾಗುತ್ತಿದೆ. ಕೃಷಿ ಇಲಾಖೆಯಲ್ಲಿ 2011-12ರಲ್ಲಿ ಭತ್ತ ನಾಟಿ ಮಾಡುವ ಯಂತ್ರಗಳನ್ನು ಇಲಾಖೆ ಮೂಲಕ ರಿಯಾಯಿತಿ ದರದಲ್ಲಿ ವಿತರಣೆ ಮಾಡಿದೆವು. ಆದರೆ, ರೈತರು ಈ ಯಂತ್ರ ಪಡೆಯಲು ಮುಂದೆ ಬರಲಿಲ್ಲ ಎಂದು ವಿವರಿಸಿದರು.  ರೈತ ಸುರೇಶ್ ಚಕೂರಿ ಮಾತನಾಡಿ, ಸಹೋದರ ಶ್ರೀನಿವಾಸ್ ಹಾಗೂ ನಾನು 2011ರಲ್ಲಿ ಭತ್ತ ನಾಟಿ ಮಾಡುವ ಯಂತ್ರ ಖರೀದಿಸಿ ನಂತರ ನಾವೇ ಭತ್ತದ ಸಸಿಗಳನ್ನು ಟ್ರೇನಲ್ಲಿ ಸಾಕಿ ಅವುಗಳನ್ನು ಯಂತ್ರದ ಮೂಲಕ ನಾಟಿ ಮಾಡುವ ಪದ್ಧತಿ ಪ್ರಾರಂಭ ಮಾಡಿದೆವು. ಪ್ರಸ್ತುತ ರಾಜ್ಯದ ಎಲ್ಲ್ಲ ಜಿಲ್ಲೆಗಳಿಗೂ ಭತ್ತದ ಸಸಿಗಳನ್ನು ಸಾಕಿ ನಮ್ಮ ಸ್ವಂತ ಯಂತ್ರದ ಮೂಲಕ ನಾಟಿ ಮಾಡಿಸುತ್ತವೆ ಎಂದು ವಿವರಿಸಿದರು.  ಅಧ್ಯಯನಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಎನ್.ಆರ್. ಪುರ, ಕೊಪ್ಪ, ಶೃಂಗೇರಿ, ತರೀಕೆರೆ ಮೂಡಿಗೆರೆ ಮತ್ತು ಚಿಕ್ಕಮಗಳೂರು ಸೇರಿ ಎಲ್ಲ ತಾಲೂಕುಗಳಿಂದ 45ಕ್ಕಿಂತ ಹೆಚ್ಚಿನ ರೈತರು ಮತ್ತು ಕೃಷಿ ಅಧಿಕಾರಿಗಳು ಆಗಮಿಸಿ ಯಾಂತ್ರೀಕೃತ ಭತ್ತ ನಾಟಿಯ ಕುರಿತು ಮಾಹಿತಿ ಪಡೆದರು.  ಚಿಕ್ಕಮಗಳೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅಧಿಕಾರಿ ವಿನುತಾ, ಕೃಷಿ ಅಧಿಕಾರಿಗಳಾದ ಶಿವಪ್ರಸಾದ್, ರಘುಕುಮಾರ್, ಪ್ರಿಯಾಂಕಾ, ದಾವಣಗೆರೆ ಕಸಬಾ ಆರ್‌ಎಸ್‌ಕೆ ಕೃಷಿ ಅಧಿಕಾರಿ ಚಂದ್ರಪ್ಪ, ಟಾೇ ಕಂಪನಿಯ ಗಿರಿ ಕೃಷ್ಣರಾಜ್, ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net