

ದಾವಣಗೆರೆ : ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಟಿಸದೆ ಬಿತ್ತನೆ ಬೀಜ, ರಸಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್. ಬಸವಂತಪ್ಪ ಎಚ್ಚರಿಕೆ ನೀಡಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಆನಗೋಡು ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿ, ರೈತರಿಗೆ ವಿತರಿಸಲು ದಾಸ್ತಾನು ಮಾಡಿರುವ ಬಿತ್ತನೆ ಬೀಜ, ರಸಗೊಬ್ಬರ ಪರಿಶೀಲಿಸಿದರು.
ರೈತರಿಂದ ಬೇಡಿಕೆ ಇರುವ ಮೆಕ್ಕೆಜೋಳದ ಬೀಜಗಳನ್ನು ದಾಸ್ತಾನು ಮಾಡದೆ ಬೇರೆ ಕಂಪನಿಗಳ ಬೀಜಗಳನ್ನು ಇಟ್ಟಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಂಟಿ ಕೃಷಿ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ವಿತರಿಸಬೇಕು ಂದು ಸೂಚನೆ ನೀಡಿದರು.
ಹಿಂದಿನ ವರ್ಷದಲ್ಲಿ ಸಂಭವಿಸಿದ ಭೀಕರ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಈಗ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ ಬರುತ್ತಿದೆ. ಈ ಸಂದರ್ಭದಲ್ಲಿ ಅವರಿಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕೃಷಿ ಉಪಕರಣಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಬಿತ್ತನೆ ಬೀಜಗಳನ್ನು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಬೇಕು. ಗುಣಮಟ್ಟ ಖಾತ್ರಿಯಾದ ನಂತರವೇ ರೈತರಿಗೆ ವಿತರಿಸಬೇಕು. ಇದನ್ನೆಲ್ಲ ಮುಂಚಿತವಾಗಿಯೆ ಮಾಡಿಕೊಳ್ಳಬೇಕಿತ್ತು ಎಂದು ಹೇಳಿದರು.
ಆನಗೋಡು ರೈತ ಸಂಪರ್ಕ ಕೇಂದ್ರದ ಎಒ ಶ್ರೀನಿವಾಸ್ ರಜೆಯ ಮೇಲೆ ತೆರಳಿದ್ದರ ಬಗ್ಗೆ ಕೆ.ಎಸ್.ಬಸವಂತಪ್ಪ ತರಾಟೆಗೆ ತೆಗೆದುಕೊಂಡರು. ಬೇರೆ ದಿನಗಳಲ್ಲಿ ರಜೆ ತೆಗೆದುಕೊಂಡರೆ ಯಾರೂ ಕೇಳುವುದಿಲ್ಲ. ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸ್ಥಳದಲ್ಲಿರಬೇಕು ಎಂದರು.