ವಿನಾಶದ ಅಂಚಿನಲ್ಲಿ ತೆಂಗು ಬೆಳೆ

DVG-KVK-12.jpg
Published on

ದಾವಣಗೆರೆ : ವಾಣಿಜ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಳದಿಂದ ಕಲ್ಪವೃಕ್ಷ ಎನಿಸಿದ ತೆಂಗು ಇಂದು ವಿನಾಶದ ಅಂಚಿನಲ್ಲಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ ಹೇಳಿದರು.
 ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೆಂಗು ಅಭಿವೃದ್ಧಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೆಂಗು ಬೆಳೆಯ ವೈಜ್ಞಾನಿಕ ತಾಂತ್ರಿಕತೆ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
 ಪೌಷ್ಠಿಕಾಂಶದಲ್ಲಿ ಅತಿ ಹೆಚ್ಚು ಲಾರಿಕ್ ಆಮ್ಲವುಳ್ಳ ತೆಂಗು ನಮೆಗೆಲ್ಲ ಸಂಜೀವಿನಿಯ ಇನ್ನೊಂದು ರೂಪ. ಇದನ್ನು ಬೆಳೆಸಿ ಉಳಿಸುವುದು ಪ್ರತಿಯೊಬ್ಬ ರೈತರ ಕರ್ತವ್ಯ ಎಂದು ತಿಳಿಸಿದರು.
 ಅತಿ ಬರಗಾಲ ತಡೆದುಕೊಳ್ಳುವ ಸಾಮರ್ಥ್ಯ ತೆಂಗಿನ ಬೆಳೆಗಿದ್ದು, ಹವಾಮಾನ ವೈಪರೀತ್ಯದಲ್ಲಿ ಉತ್ತಮ ಆದಾಯ ಕೊಡುವ ತೋಟಗಾರಿಕೆ ಬೆಳೆ ಇದಾಗಿದೆ ಎಂದರು.
 ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲಾಖೆಯಿಂದ ಬೆಳೆ ವಿಸ್ತರಣೆ, ತೆಂಗು ಪುನಶ್ಚೇತನ, ರೋಗ ಮತ್ತು ಕೀಟಗಳ ನಿರ್ವಹಣೆಗೆ ಅನುದಾನ ಲಭ್ಯವಿದೆ ಎಂದು ಹೇಳಿದರು.
 ತೆಂಗು ಅಭಿವೃದ್ಧಿ ಮಂಡಳಿ ಹಿರಿಯ ತಾಂತ್ರಿಕ ಅಧಿಕಾರಿ ಜಿ. ಧನಶೇಖರ್ ಮಾತನಾಡಿ, ತೆಂಗಿನಮರ ಹತ್ತುವ ಕಾರ್ಯಕ್ರಮ, ಮೌಲ್ಯವರ್ಧನೆ ಮತ್ತ್ತು ಸಂಸ್ಕರಣಾ ಕಾರ್ಯಕ್ರಮ, ಗುಣ ಮಟ್ಟದ ಸಸಿಗಳ ಉತ್ಪಾದನೆ ಹಾಗೂ ಉತ್ತೇಜನಾ ಯೋಜನೆಗಳ ಮಾಹಿತಿ ನೀಡಿದರು.
 ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಎನ್.ದೇವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರದಿಂದ ಜಿಲ್ಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಮರ ಹತ್ತುವ ಸ್ನೇಹಿತರಿಗೆ ಕೌಶಲ ತರಬೇತಿ ನೀಡಲಾಗಿದೆ. ತೆಂಗಿನ ಬಿಳಿನೊಣದ ನಿಯಂತ್ರಣಕ್ಕೆ ಐಸಿರಿಯಾ ಪರೋಪಜೀವಿಯನ್ನು ಉತ್ಪಾದಿಸಿ ರೈತರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
 ಮಣ್ಣು ವಿಜ್ಞಾನಿ ಎಚ್.ಎಂ.ಸಣ್ಣಗೌಡ್ರು ತೆಂಗಿನ ಪೋಷಕಾಂಶಗಳ ನಿರ್ವಹಣೆ, ಡಾ.ಟಿ.ಜಿ.ಅವಿನಾಶ್ ರೋಗ ಮತ್ತು ಕೀಟಗಳ ನಿರ್ವಹಣೆ, ವೈಜಿಪಿ ರೈತ ಉತ್ಪಾದಕ ಕಂಪನಿ ಮುಖ್ಯಸ್ಥ ಪ್ರಶಾಂತ್ ಮೌಲ್ಯವರ್ಧನೆ ಮತ್ತು ಸಂಸ್ಕರಣೆಯ ಬಗ್ಗೆ ಮಾಹಿತಿ ನೀಡಿದರು.
 ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರೇಷ್ಮಾ ಪರ್ವಿನ್, ವೀರಭದ್ರಸ್ವಾಮಿ, ಇಲಾಖಾ ಅಧಿಕಾರಿ ಶ್ರೀಲಕ್ಷ್ಮೀ, ನಿಟ್ಟೂರು ತರಳಬಾಳು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net