ಯಾಂತ್ರೀಕೃತ ಭತ್ತದ ನಾಟಿಯಿಂದ ಲಾಭ

dvg-kvk_20250726004818669.jpg
Published on

ದಾವಣಗೆರೆ  : ಜಿಲ್ಲೆಯಲ್ಲಿ ಭತ್ತ ಪ್ರಮುಖವಾದ ಬೆಳೆಯಾಗಿದೆ. ಸಸಿಮಡಿ ಹಂತದಲ್ಲೇ ನೀರಿನ ಬಳಕೆಯನ್ನು ಕಡಿಮೆ ಮಾಡಬೇಕಾದರೆ ಯಂತ್ರದ ಮುಖಾಂತರ ನಾಟಿ ಮಾಡುವ ಪದ್ಧತಿಗೆ ರೈತರು ಹೋಗಬೇಕಾಗಿದೆ ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಬಿ.ಒ. ಹೇಳಿದರು.  ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಹಳೇಬಾತಿ ಗ್ರಾಮದಲ್ಲಿ, ಭತ್ತದಲ್ಲಿ ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿಯ ಮುಂಚೂಣಿ ಪ್ರಾತ್ಯಕ್ಷಿಕೆಯ ಭಾಗವಾಗಿ ಯಂತ್ರದ ಮುಖಾಂತರ ಭತ್ತ ನಾಟಿ ಮಾಡುವ ಸಸಿ ಮಡಿ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.  ಪ್ರತಿ ಎಕರೆಗೆ 10 ಕೆಜಿ ಬಿತ್ತನೆ ಬೀಜದಿಂದ ತಯಾರಿಸಲು 70 ಟ್ರೇಗಳು ಮತ್ತು ಮಣ್ಣು ಮಿಶ್ರಿತ ಸಾವಯವ ಗೊಬ್ಬರ ಬೇಕಾಗುತ್ತದೆ. (ಪ್ರತಿ ಟ್ರೇ ಗೆ 120 ಗ್ರಾಂ ಬಿತ್ತನೆ ಬೀಜ ಬೀಳುತ್ತದೆ). ಇದರಿಂದ ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹಾಗೂ ಸಾಮಾನ್ಯ ಪದ್ಧತಿಯಲ್ಲಿ ಸಸಿ ಮಡಿ ಮಾಡುವ ಖರ್ಚನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.  ಪ್ರಗತಿಪರ ಕೃಷಿಕ ನಾಗರಾಜ್ ಮಾತನಾಡಿ, 15 ವಷರ್ಗಳಿಂದ ಈ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದೇನೆ. ಇದರ ಜತೆಗೆ ನೀರಿನ ನಿರ್ವಹಣೆ ಕೂಡ ಮಾಡಬೇಕಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 20 ಎಕರೆ ಪ್ರದೇಶದಲ್ಲಿ ಯಂತ್ರದ ಮುಖಾಂತರ ನಾಟಿಯಾಗುತ್ತದೆ ಎಂದರು.  ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿಯನ್ನು ರೈತರು ಪಾಲಿಸಿದರೆ ರೋಗ ಮತ್ತು ಕೀಟಗಳ ಬಾಧೆ ಕಡಿಮೆಯಾಗುತ್ತದೆ ಎಂದು ಪ್ರಗತಿಪರ ಕೃಷಿಕ ಶಂಕರ್ ಅಭಿಪ್ರಾಯಪಟ್ಟರು. ಪದ್ಧತಿ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net