

ದಾವಣಗೆರೆ : ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಡಕೆಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಯೋಜನೆ ರೂಪಿಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಕೃಷಿ ಯೋಜನೆಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಅಡಕೆಯನ್ನು ಕಡಿಮೆ ಮಳೆಯಾಶ್ರಿತ ಪ್ರದೇಶದಲ್ಲಿಯೂ ಕೊಳವೆಬಾವಿ ನೀರಿನಿಂದ ಬೆಳೆಯಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಅಡಕೆಯನ್ನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಇನ್ನೂ ಕೆಳಕ್ಕೆ ಹೋಗಲಿದೆ. ಇದರಿಂದ ರೈತರಿಗೂ ನಷ್ಟವಾಗಲಿದ್ದು ಪ್ರಾಕೃತಿಕ ಸಂಪತ್ತು ವ್ಯರ್ಥವಾಗುತ್ತಿದೆ. ಹರಿಹರ, ನ್ಯಾಮತಿ ಹೊರತುಪಡಿಸಿ ದಾವಣಗೆರೆ, ಹೊನ್ನಾಳಿ ತಾಲೂಕುಗಳು ನಿರ್ಣಾಯಕ ಹಂತ ತಲುಪಿವೆ. ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚು ಬಳಕೆ ಮಾಡಿದ್ದು ಅಂತಿಮ ಹಂತವನ್ನು ತಲುಪಿವೆ ಎಂದು ವಿವರಿಸಿದರು. ಆದ್ದರಿಂದ ಅಡಕೆಗೆ ಪರ್ಯಾಯವಾಗಿ ಮೆಕೆಡೋನಿಯ, ಸೀತಾಫಲ, ಅಂತರ ಬೆಳೆಯನ್ನಾಗಿ ಕೋಕೋ, ಪೆಪ್ಪರ್ ಬೆಳೆಯಲು ಯೋಜನೆ ರೂಪಿಸಬೇಕೆಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು.