ಚುರುಕಾದ ಮುಂಗಾರು, ಬಿತ್ತನೆಗೆ ವೇಗ

dvg-sowing-1.jpg
Published on

ರಮೇಶ ಜಹಗೀರದಾರ್ ದಾವಣಗೆರೆ :  ಒಂದು ವಾರದ ಬಿಡುವಿನ ನಂತರ ಮುಂಗಾರು ಚುರುಕಾಗಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ. ಜಿಲ್ಲೆಯಲ್ಲಿ ಹಂಗಾಮಿನ ಬಿತ್ತನೆ ಕಾರ್ಯವೂ ವೇಗ ಪಡೆಯತೊಡಗಿದೆ.  ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಒಟ್ಟು 1.96 ಲಕ್ಷ ಹೆಕ್ಟೇರ್ ಗುರಿಯಿದ್ದು ಇದುವರೆಗೆ 15 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ವಾರದಲ್ಲಿ ಬಿತ್ತನೆ ಇನ್ನಷ್ಟು ವ್ಯಾಪಕವಾಗುವ ನಿರೀಕ್ಷೆಯಿದೆ.  ಮೇ ಅಂತ್ಯದಲ್ಲಿ ಹಾಗೂ ಜೂನ್ ಮೊದಲ ವಾರದಿಂದ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕೃಷಿ ಇಲಾಖೆಯು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯ 24 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಖರೀದಿ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಬರಲಿದ್ದಾರೆ. ಮಳೆ ನೋಡಿಕೊಂಡು ಕೃಷಿಕರು ಬಿತ್ತನೆ ಮಾಡಲಿದ್ದಾರೆ.  ಈಗಾಗಲೇ ಬಿತ್ತನೆಯಾಗಿರುವ ಕಡೆಗಳಲ್ಲಿ ಬೆಳೆಗಳು ಮೊಳಕೆಯೊಡೆಯ ತೊಡಗಿವೆ. ಈ ಹಂತದಲ್ಲಿ ಒಂದು ವಾರ ಮಳೆ ಮಾಯವಾಗಿ ಬಿಸಿಲು ಆವರಿಸಿತ್ತು. ಇದು ರೈತರಿಗೆ ಆತಂಕ ಮೂಡಿಸಿತ್ತು. ಆದರೆ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆ ಆಶಾದಾಯಕವಾಗಿದೆ.  ...  (ಬಾಕ್ಸ್)  ಮೇ ತಿಂಗಳಲ್ಲಿ ಅಧಿಕ ಮಳೆ  ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೇ ತಿಂಗಳಲ್ಲಿ ಅಧಿಕ ಮಳೆಯಾಗಿದೆ. ವಾಡಿಕೆಯ ಪ್ರಕಾರ 62.9 ಮಿ.ಮೀ. ಮಳೆಯಾಗಬೇಕಿತ್ತು. 121 ಮಿ.ಮೀ. ಬೀಳುವ ಮೂಲಕ ಶೇ. 92.369 ರಷ್ಟು ಹೆಚ್ಚುವರಿಯಾಗಿದೆ.  ಮೇ ತಿಂಗಳಲ್ಲಿ ಚನ್ನಗಿರಿ ತಾಲೂಕಿನಲ್ಲಿ 121.7 ಮಿ.ಮೀ, ದಾವಣಗೆರೆ-110 ಮಿ.ಮೀ, ಹರಿಹರ-115.3 ಮಿ.ಮೀ, ಹೊನ್ನಾಳಿ-145.8 ಮಿ.ಮೀ, ಜಗಳೂರು-123.2 ಮಿ.ಮೀ. ಹಾಗೂ ನ್ಯಾಮತಿ ತಾಲೂಕಿನಲ್ಲಿ 117.2 ಮಿ.ಮೀ. ಮಳೆಯಾಗಿತ್ತು.  ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 32.2 ಮಿ.ಮೀ. ಮಳೆಯಾಗಬೇಕಿತ್ತು. 47.2 ಮಿ.ಮೀ. ಆಗಿತ್ತು (ಶೇ. 46.584 ಹೆಚ್ಚುವರಿ). ಮಾರ್ಚ್ 1 ರಿಂದ ಮೇ 31ರ ವರೆಗೆ ಮುಂಗಾರು ಪೂರ್ವದಲ್ಲಿ ವಾಡಿಕೆಯಂತೆ 102.2 ಮಿ.ಮೀ. ಮಳೆಯಾಗಬೇಕಿತ್ತು. 170.2 ಮಿ.ಮೀ. ಸುರಿಯುವ ಮೂಲಕ ಶೇ. 66.362 ರಷ್ಟು ಹೆಚ್ಚು ಮಳೆಯಾಗಿದೆ.  ಆದರೆ ಜೂನ್ ಮೊದಲ ವಾರದಲ್ಲಿ ಚಿತ್ರಣ ಬದಲಾಯಿತು. ಮಳೆಯ ಕೊರತೆಯಾಗಿ ಬಿಸಿಲು ಕಾಣಿಸಿಕೊಂಡಿತು. ಜೂನ್ 1 ರಿಂದ 10 ರ ವರೆಗೆ ವಾಡಿಕೆಯಂತೆ 28.4 ಮಿ.ಮೀ. ಮಳೆಯಾಗಬೇಕಿತ್ತು. 23.3 ಮಿ.ಮೀ. ಮಾತ್ರ ಮಳೆ ಬಿದ್ದಿದ್ದು ಶೇ. 17.958 ರಷ್ಟು ಕೊರತೆಯಾಗಿದೆ.  ...  (ಬಾಕ್ಸ್)  ಯಾವ ಬೆಳೆ ಎಷ್ಟು ಹೆಕ್ಟೇರ್?  ಹಂಗಾಮಿನಲ್ಲಿ 1.96 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದೆ. ಲಭ್ಯ ಅಂಕಿ ಅಂಶಗಳ ಪ್ರಕಾರ 10,678 ಹೆಕ್ಟೇರ್‌ನಲ್ಲಿ ಈಗಾಗಲೇ ಬಿತ್ತನೆಯಾಗಿದೆ. ಆದರೆ ಮೂಲಗಳ ಪ್ರಕಾರ 15 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವನ್ನು ಆವರಿಸಿದೆ.  ಅದರಲ್ಲಿ ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು 9885 ಹೆಕ್ಟೇರ್‌ನಲ್ಲಿ ಬಿತ್ತಲಾಗಿದೆ. ಜೋಳ-45 ಹೆಕ್ಟೇರ್, ರಾಗಿ-75 ಹೆಕ್ಟೇರ್, ತೊಗರಿ-30 ಹೆಕ್ಟೇರ್, ಎಣ್ಣೆಕಾಳುಗಳ ಪೈಕಿ ಶೇಂಗಾವನ್ನು 320 ಹೆಕ್ಟೇರ್, ಸೂರ್ಯಕಾಂತಿ 98 ಹೆಕ್ಟೇರ್, ಸೋಯಾಬೀನ್ 60 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ವಾಣಿಜ್ಯ ಬೆಳೆಗಳಲ್ಲಿ ಹತ್ತಿಯನ್ನುಬ 165 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net