ಬೆಳೆ ದಾಖಲಿಸಲು ಬಳಸಿ ಮೊಬೈಲ್ ಆ್ಯಪ್

dvg-krishi.jpg
Published on

ದಾವಣಗೆರೆ  ಕೃಷಿ ಇಲಾಖೆ ವತಿಯಿಂದ 2025-26ನೇ ಬೇಸಿಗೆ ಹಂಗಾಮಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ಸ್ವತಃ ದಾಖಲಿಸಲು ಬೆಳೆ ಸಮೀಕ್ಷೆಗೆ ಚಾಲನೆ ನೀಡಿದ್ದು, ಕೃಷಿಕರು ಮೊಬೈಲ್ ಆ್ಯಪ್ ಮೂಲಕ ಬೆಳೆ ದಾಖಲಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ ನೀಡಿದರು.  ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬೆಳೆ ಸಮೀಕ್ಷೆ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಇದು ರೈತಸ್ನೇಹಿ ಕಾರ್ಯಕ್ರಮವಾಗಿದ್ದು ಈ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಅನುಕೂಲವಾಗಲಿದೆ ಎಂದರು.  ಆದ್ದರಿಂದ ಸ್ವತಃ ರೈತರೇ ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೌಡ್ ಮಾಡಿಕೊಂಡು ಅದರ ಮೂಲಕ ಸಕಾಲಿಕವಾಗಿ ಎಲ್ಲ ಬೆಳೆಗಳ ವಿವರಗಳನ್ನು ಅಪ್‌ಲೋಡ್ ಮಾಡುವುದರಿಂದ ನ್ಯೂನತೆಗಳನ್ನು ಕಡಿಮೆ ಮಾಡಬಹುದು. ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ಸಹ ತಪ್ಪಿಸಬಹುದಾಗಿದೆ ಎಂದು ಹೇಳಿದರು.  ಆ್ಯಪ್ ಮೂಲಕ ಹೇಗೆ ಬೆಳೆ ದಾಖಲಿಸಬೇಕೆಂದು ರೈತರಿಗಾಗಿ ಇಲಾಖೆ ಬೆಳೆ ಸಮೀಕ್ಷೆ ಕೈಪಿಡಿ ಬಿಡುಗಡೆ ಮಾಡಿದೆ. ಇದರಿಂದ ಮಾಹಿತಿ ತಿಳಿದು ಜಮೀನುಗಳಲ್ಲಿ ನೀವು ಬೆಳೆದ ಬೆಳೆಗಳನ್ನು ಮೊಬೈಲ್ ಆ್ಯಪ್ ಮೂಲಕ ಸರಿಯಾಗಿ ದಾಖಲಿಸಬೇಕು. ನೀವು ದಾಖಲಿಸದಿದ್ದರೆ ಇಲಾಖೆಯಿಂದ ನಿಯೋಜಿಸಿರುವ ಪಿಆರ್‌ಗಳು (ಖಾಸಗಿ ನಿವಾಸಿಗಳು) ಆ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.  ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಹಿಂದಿನ ಸರ್ಕಾರ ಕೃಷಿ ಹೊಂಡ ಮಂಜೂರು ಮಾಡುವುದನ್ನು ಸ್ಥಗಿತಗೊಳಿಸಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ನನ್ನ ಕ್ಷೇತ್ರ ಮಳೆ ಆಧಾರಿತ ಪ್ರದೇಶವಾಗಿದ್ದರಿಂದ ಕೃಷಿ ಹೊಂಡಗಳು ರೈತರಿಗೆ ವರದಾನವಾಗಿವೆ. ಇದರಿಂದ ರೈತರು ಹೈನುಗಾರಿಕೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.  ಇದೇ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಶಾಸಕ ಕೆ.ಎಸ್. ಬಸವಂತಪ್ಪ ಜಾಕೆಟ್ ವಿತರಿಸಿದರು. ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ಕೃಷಿ ಅಧಿಕಾರಿಗಳಾದ ಚಂದ್ರಪ್ಪ, ಬೀರಪ್ಪ, ಬೆಳೆ ಸಮೀಕ್ಷೆ ನಡೆಸುವ ಸಿಬ್ಬಂದಿ ಹಾಗೂ ಫಲಾನುಭವಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net