ಆಹಾರೋತ್ಪನ್ನಗಳಲ್ಲಿ ಇರಲಿ ನಮ್ಮದೇ ಬ್ರಾೃಂಡ್

dvg-sasya-santhe.jpg
Published on

ದಾವಣಗೆರೆ : ರೈತರು ಸಂಘಟಿತರಾಗಿ ಕೃಷಿ ಉತ್ಪನ್ನಗಳನ್ನು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರಾೃಂಡ್ ಮಾಡುವ ಮಟ್ಟಕ್ಕೆ ಬೆಳೆದು ಸಬಲರಾಗಬೇಕು ಎಂದು ಬೆಂಗಳೂರಿನ ಐಸಿಎಆರ್-ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿ. ವೆಂಕಟ ಸುಬ್ರಮಣ್ಯನ್ ಹೇಳಿದರು.  ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ, ಕೃಷಿಕರ ಸಮೃದ್ಧಿಗೆ ಸಸ್ಯ ಸಂತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ರೈತ ಉತ್ಪಾದಕ ಸಂಸ್ಥೆಗಳಲ್ಲಿ ಒಗ್ಗೂಡಬೇಕು. ಅಲ್ಲಿ ಮಧ್ಯವರ್ತಿಗಳ ಕಾಟವಿಲ್ಲ, ಮಾರುಕಟ್ಟೆಯ ಚಿಂತೆ ಇರುವುದಿಲ್ಲ, ಹಣದ ಉಳಿತಾಯವಾಗುವ ಜತೆಗೆ ಕೃಷಿಕರ ಹಿತದ ರಕ್ಷಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ದೇಶವು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಸ್ಥಳೀಯ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ನಮ್ಮದೇ ಬ್ರಾೃಂಡ್ ರೂಪಿಸಿ ಬಹುರಾಷ್ಟ್ರೀಯ ಕಂಪನಿಗಳ ಸವಾಲನ್ನು ಎದುರಿಸಬೇಕಿದೆ. ಆಹಾರ ಉತ್ಪಾದನೆಯಲ್ಲಿ ಮೇಲುಗೈ ಸಾಧಿಸಬೇಕು. ಕೃಷಿಕರ ಬದುಕು ಸಮೃದ್ಧವಾಗಬೇಕು ಎಂದು ಆಶಿಸಿದರು.  ಬಾಸುಮತಿ ಅಕ್ಕಿ, ಅಮೂಲ್ ಹಾಗೂ ನಂದಿನಿ ಉತ್ಪನ್ನಗಳ ಉದಾಹರಣೆ ನೀಡಿದ ಅವರು, ಗುಣಮಟ್ಟಕ್ಕೆ ಬೇಡಿಕೆ ಇದ್ದೇ ಇದೆ. ಈ ಬಗ್ಗೆ ರೈತರು ಗಮನ ಹರಿಸುವ ಅಗತ್ಯವಿದೆ ಎಂದರು.  ವಸಾಹತುಶಾಹಿ ಮನಸ್ಥಿತಿಯಿಂದ ಹೊರ ಬರಬೇಕು. ಫಾಸ್ಟ್ ಫುಡ್, ಜಂಕ್ ಫುಡ್‌ಗಳಿಗೆ ಮರುಳಾಗಬಾರದು. ನಮ್ಮ ಆಹಾರ ಪದ್ಧತಿ ಬದಲಾಗಬೇಕು. ಸಿರಿಧಾನ್ಯದ ಆಹಾರೋತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸಬೇಕು. ಮಜ್ಜಿಗೆ, ಕೊಬ್ಬರಿ ಎಣ್ಣೆಯನ್ನು ಬಳಸಬೇಕು. ಇದರಿಂದ ನಮ್ಮ ಆರೋಗ್ಯವೂ ರಕ್ಷಣೆಯಾಗುತ್ತದೆ, ಆರ್ಥಿಕತೆಯೂ ಸುಧಾರಣೆಯಾಗುತ್ತದೆ ಎಂದು ಹೇಳಿದರು.  ರೈತರು ಮಳೆಯ ಜೂಜಾಟ, ಲೇವಾದೇವಿ ವ್ಯವಸ್ಥೆಯ ನಡುವೆ ನಲುಗಿದ್ದಾರೆ. ಮಳೆ ನೀರನ್ನು ಹಿಡಿದಿಡಬೇಕು, ಪೋಲಾಗುವುದನ್ನು ತಡೆಯಬೇಕು. ಕೃಷಿಕರಿಗೆ ಖಚಿತ ನೀರಾವರಿ ಸೌಲಭ್ಯ ಇರಬೇಕು. ಎಂಥದೇ ಸಂದರ್ಭ ಬಂದರೂ ಎದುರಿಸುವ ಶಕ್ತಿಯನ್ನು ಅವರಿಗೆ ತುಂಬಬೇಕು ಎಂದು ಅಭಿಪ್ರಾಯಪಟ್ಟರು.  ಎಲ್ಲರಿಗೆ ಅನ್ನ ನೀಡುವ ರೈತನ ಬಗ್ಗೆ ತಾತ್ಸಾರ ಮನೋಭಾವ ಇರಬಾರದು. ಕೃಷಿಕರೇ ನಿಜವಾದ ದೇವರಾಗಿದ್ದು ಅವರಿಗೆ ಗೌರವ ನೀಡಬೇಕು. ಹೆದ್ದಾರಿಗಳಲ್ಲಿ ಟೋಲ್‌ನಿಂದ ರೈತರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.  ಯುವಜನರು ಪಿಜ್ಜಾ ತಿನ್ನುವುದನ್ನು ಬಿಡಬೇಕು. ಬೆಣ್ಣೆ ದೋಸೆಯಂಥ ಸ್ಥಳೀಯ ಖಾದ್ಯಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು. ಹಳ್ಳಿಗಳಿಗೆ ಹಣ ಹರಿದು ಬರಬೇಕು, ದೇಶದ ಆರ್ಥಿಕತೆ ಬೆಳೆಯಬೇಕು ಎಂದು ಹೇಳಿದರು.  ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್, ದಾವಣಗೆರೆ ಕೆವಿಕೆ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ, ವಿಷಯ ತಜ್ಞ ಎಂ.ಜಿ. ಬಸವನಗೌಡ, ಪ್ರಗತಿಪರ ರೈತ ಮುರುಗೇಂದ್ರಪ್ಪ ಇದ್ದರು.    ...  (ಕೋಟ್)  ಜಿಲ್ಲೆಯಲ್ಲಿ ಆಹಾರ ಉತ್ಪನ್ನ ತಯಾರಿಕಾ ಘಟಕಗಳನ್ನು ಸ್ಥಾಪಿಸಬೇಕು. ಫುಡ್ ಪಾರ್ಕ್ ಆಗಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಾಗಬೇಕು. ಹಾಗಾದಾಗ ಅದರ ಲಾಭ ರೈತರಿಗೆ ತಲುಪುತ್ತದೆ. ಸರ್ಕಾರ ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ.   ಡಾ.ಕೆ.ಪಿ. ಬಸವರಾಜಪ್ಪ, ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ  ...    (ಬಾಕ್ಸ್)  ಸಸ್ಯಗಳ ಲೋಕ  ಸಸ್ಯ ಸಂತೆಯಲ್ಲಿ ರಾಜ್ಯದ ವಿವಿಧೆಡೆಯ ನರ್ಸರಿಗಳು, ಸಸ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದು ಬುಧವಾರವೂ ಮುಂದುವರಿಯಲಿದೆ.  ರೈತರು, ವಿದ್ಯಾರ್ಥಿಗಳು, ಗೃಹಿಣಿಯರು ಸೇರಿದಂತೆ ಸಾರ್ವಜನಿಕರು ಸಸಿಗಳನ್ನು ಖರೀದಿಸಿದರು. ಗೃಹಾಲಂಕಾರ ಹೂವು, ಸಸಿಗಳ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಆಸಕ್ತಿ ತೋರಿದ್ದು ಕಂಡುಬಂತು.  50ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಪ್ರಮುಖ ಆಕರ್ಷಣೆಯಾಗಿತ್ತು. ಜತೆಗೆ ತರಕಾರಿ, ಸೊಪ್ಪಿನ ಬೀಜಗಳು ಇದ್ದವು. ಕೈತೋಟ ಮತ್ತು ತಾರಸಿ ತೋಟಗಳಿಗೆ ಬೇಕಾಗುವ ಸಲಕರಣೆಗಳು, ಸಾವಯವ ಪರಿಕರ, ಗೊಬ್ಬರ, ಸಿರಿಧಾನ್ಯಗಳ ಉಪ ಉತ್ಪನ್ನಗಳು, ಸಾವಯವ ಆಹಾರ ಪದಾರ್ಥಗಳ ಮಾರಾಟವೂ ಇದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆಗಮಿಸಿದ್ದ ನರ್ಸರಿ ಆಂತೋರಿಯಂನಿಂದ ಹಿಡಿದು ಎಲ್ಲ ಗೃಹಾಲಂಕಾರ ಹೂವು, ಸಸಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಾವಯವ ಅಕ್ಕಿ, ರಾಗಿ ಕೂಡ ಪ್ರದರ್ಶದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net