ಹೊಸ ಕಾನೂನುಗಳ ಬಗ್ಗೆ ಬೇಕಿದೆ ಸ್ಪಷ್ಟತೆ

dvg-upanyasa-15.jpg
Published on

ದಾವಣಗೆರೆ :  ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವಲ್ಲಿ ಹಲವು ಗೊಂದಲಗಳಿದ್ದು ಕಾಲ ಕ್ರಮೇಣ ಸ್ಪಷ್ಟತೆ ಸಿಗಬಹುದು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.  ಜಿಲ್ಲಾ ವಕೀಲರ ಸಂಘ, ಆರ್.ಎಲ್. ಕಾನೂನು ಕಾಲೇಜು ಹಾಗೂ ಲಾಯರ್ಸ್ ಲಾ ಪಬ್ಲಿಷರ್ಸ್ ಸಹಯೋಗದಲ್ಲಿ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷೃ ಅಧಿನಿಯಮ’ ವಿಷಯದ ಕುರಿತು ಉಪನ್ಯಾಸ ನೀಡಿದರು.  ಐದು ಜನ ಕುರುಡರು ಆನೆ ಮುಟ್ಟಿ ನೋಡಿ ತಮಗೆ ತೋಚಿದಂತೆ ವಿಶ್ಲೇಷಣೆ ಮಾಡುವ ಕತೆಯನ್ನು ಉದಾಹರಿಸಿ, 3 ಹೊಸ ಕಾನೂನುಗಳ ವಿಷಯದಲ್ಲೂ ಅದೇ ಆಗುತ್ತಿದೆ. ಕಾಯ್ದೆಗಳ ಅನುಷ್ಠಾನ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ತರಬೇತಿಯ ಅಗತ್ಯವಿದೆ ಎಂದು ತಿಳಿಸಿದರು.  ಕೆಲವು ಚಿಕ್ಕ ಅಪರಾಧಗಳಿಗೆ ‘ಕಮ್ಯುನಿಟಿ ಸರ್ವೀಸ್’ ಎಂಬ ಶಿಕ್ಷೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದರ ಬಗ್ಗೆ ವ್ಯಾಖ್ಯಾನ ನೀಡಿಲ್ಲ. ಅವರಿಗೆ ಆ ಶಿಕ್ಷೆ ನೀಡಲಾಯಿತೆ ಎಂದು ತಿಳಿಯುವುದು ಹೇಗೆ ಎನ್ನುವ ಸ್ಪಷ್ಟತೆ ಇಲ್ಲ ಎಂದರು.  ನೂತನ ಕಾನೂನುಗಳಲ್ಲಿ ತಾಂತ್ರಿಕ ಆವಿಷ್ಕಾರಗಳಿಗೆ ಮಹತ್ವ ನೀಡಲಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಹಾಗೆ ದೂರು ನೀಡಿದ ವ್ಯಕ್ತಿ 3 ದಿನಗಳಲ್ಲಿ ಠಾಣೆಗೆ ಬರಬೇಕು ಎಂಬ ನಿಯಮವಿದೆ. ಒಂದು ವೇಳೆ ಆ ವ್ಯಕ್ತಿ ಬರದಿದ್ದರೆ ಹೇಗೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಅದರ ಸತ್ಯಾಂಶ ಪತ್ತೆ ಹಚ್ಚುವುದು ಕಷ್ಟವಾಗಬಹುದು ಎಂದು ಹೇಳಿದರು.  ಕೆಲವು ಪ್ರಕರಣಗಳಲ್ಲಿ ದೂರು ದಾಖಲಿಸಿಕೊಳ್ಳಲು 14 ದಿನಗಳ ಅವಕಾಶ ನೀಡಲಾಗಿದೆ. ಇದರಿಂದ ಸಾರ್ವಜನಿಕರ ಶೋಷಣೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.  ಸ್ಥಳ ಪರಿಶೀಲನೆ, ಪಂಚನಾಮೆಯಂಥ ಸಂದರ್ಭಗಳಲ್ಲಿ ಎಲೆಕ್ಟ್ರಾನಿಕ್ ಸಾಕ್ಷಿಗಳನ್ನು ದಾಖಲಿಸಬೇಕು ಎಂದು ಹೇಳಲಾಗಿದೆ. ಅಂಥ ದಾಖಲೆಗಳನ್ನು ಸಂರಕ್ಷಣೆ ಮಾಡುವುದು ದೊಡ್ಡ ಸವಾಲಾಗಲಿದೆ ಎಂದು ಅಭಿಪ್ರಾಯಪಟ್ಟರು.  ಇಂಥ ಗೊಂದಲಗಳು ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಯೂ ಇರುತ್ತದೆ. ಒಂದೆರಡು ವರ್ಷಗಳಲ್ಲಿ ನಾವು ಗೊಂದಲಗಳು ದೂರವಾಗಿ ಸ್ಪಷ್ಟತೆ ಸಿಗಬಹುದು ಎಂದು ತಿಳಿಸಿದರು.  ಮಹಿಳೆಯರು, ಮಕ್ಕಳು, ಅಶಕ್ತರು ಹೊಸ ಕಾನೂನುಗಳ ಕೇಂದ್ರ ಬಿಂದುಗಳಾಗಿದ್ದಾರೆ. 2 ಕಾನೂನುಗಳು ಬ್ರಿಟಿಷರ ಕಾಲದಲ್ಲಿ ರೂಪಿತವಾಗಿದ್ದವು. ಪ್ರಸ್ತುತ ಸಾಮಾಜಿಕ ನಿಯಮಗಳಿಗೆ ಹೊಂದಿಕೊಳ್ಳುವ ಉದ್ದೇಶದಿಂದ ಬದಲಾವಣೆ ತರಲಾಗಿದೆ. ದಂಡನೆಗಿಂತ ನ್ಯಾಯಕ್ಕೆ ಮಹತ್ವ ನೀಡಲಾಗಿದೆ ಎಂದು ಹೇಳಿದರು.  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ ಸ್ವಾಗತಿಸಿದರು. ಕಾರ್ಯದರ್ಶಿ ಎಸ್. ಬಸವರಾಜ ನಿರೂಪಿಸಿದರು. ಅಜಯ್ ಪ್ರಾರ್ಥಿಸಿದರು.  ಇದೇ ವೇಳೆ ಡಾ.ಡಿ.ವಿ. ಗುರುಪ್ರಸಾದ್ ರಚಿಸಿದ ‘ನೂತನ ಅಪರಾಧಿಕ ಕಾನೂನುಗಳ ಕೈಪಿಡಿ’ ಮತ್ತು ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ. ಶ್ರೀನಿವಾಸ್ ರಚಿಸಿದ ಸರ್ಕಾರಿ ನೌಕರರ ಪದೋನ್ನತಿ ಕಾರ್ಯ ನಿರ್ವಹಣೆಯ ಕುರಿತ ಕೈಪಿಡಿಯನ್ನು ಲೋಕಾರ್ಪಣೆ ಮಾಡಲಾಯಿತು.  ...  (ಕೋಟ್)  ಹೊಸ ಕಾನೂನುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಿದೆ. ಅವುಗಳ ನಿರ್ವಹಣೆಗೆ ಕೈಜೋಡಿಸಬೇಕಿದೆ. ನಿರಂತರ ಅಧ್ಯಯನ ಮತ್ತು ಹೊಸ ಕಾನೂನುಗಳ ಬಗ್ಗೆ ಜ್ಞಾನ ಹೊಂದುವ ಮೂಲಕ ವಕೀಲರು ತಮ್ಮ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯ.   ಡಾ.ಜಿ.ಎಸ್. ಯತೀಶ್, ಆರ್.ಎಲ್. ಕಾನೂನು ಕಾಲೇಜು ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net