

ದಾವಣಗೆರೆ : ಜಿಂಕೆ ಸಾಕಿದ್ದಾರೆ ಎಂದು ನನ್ನ ಪ್ರತಿಷ್ಠೆಗೆ ಹಾನಿ ಮಾಡಲು ಬಿಜೆಪಿ ಅಪಪ್ರಚಾರ ಮಾಡಿತು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ದೂರಿದರು.
ಜಿಲ್ಲಾ ವಕೀಲರ ಸಂಘದ ಭವನದಲ್ಲಿ ಶುಕ್ರವಾರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡಿದರು, ಏನೂ ಮಾಡಲಾಗದೆ ಜಿಂಕೆ ಸಾಕಿದ್ದಾರೆ, ಪ್ರಾಣಿ ಸಾಕಿದ್ದಾರೆ ಎಂದು ಸಣ್ಣತನ ತೋರಿದರು. ಅದಕ್ಕೆಲ್ಲ ನ್ಯಾಯಾಲಯ ಉತ್ತರ ಕೊಟ್ಟಿದೆ. ನಾವೇನು ಸಾಕಿದ್ದೇವೆ ಅದಕ್ಕೆಲ್ಲ ದಾಖಲೆಗಳಿವೆ. ಸುಖಾಸುಮ್ಮನೆ ಬಿಜೆಪಿಯವರು ಆರೋಪ ಮಾಡುವುದು ಸರಿಯಲ್ಲ ಎಂದರು.
ಕೋವಿಡ್ ಲಸಿಕೆ ವಿತರಣೆಯಲ್ಲಿಯೂ ಭ್ರಷ್ಟಾಚಾರ ಮಾಡಿದರು. ಇದಕ್ಕೆ ಚಿಕ್ಕಬಳ್ಳಾಪುರದ ಮಾಜಿ ಸಚಿವ ಸುಧಾಕರ್ ಸುಳ್ಳು ಬಿಲ್ ಸಾಕ್ಷಿ. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದಲ್ಲಿಯೂ ಬಡ ರೋಗಿಗಳು, ಕಷ್ಟದಲ್ಲಿರುವವರನ್ನು ನೋಡದೆ ರಾಜಕೀಯ ಮಾಡಿದರು. ಇದೆಲ್ಲ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.
ನಿಜವಾದ ರಾಜಕಾರಣಿ ಎಂದರೆ ಬುದ್ಧಿವಂತರಾದ ವಕೀಲರು. ಸಿಎಂ ಸಿದ್ದರಾಮಯ್ಯ ಸಹ ವಕೀಲರಾಗಿ ಹೋರಾಟದ ಮೂಲಕ ಸಿಎಂ ಆದವರು ಎಂದರು.
ಬೆಂಗಳೂರಿನ ಹೈಕೋರ್ಟ್, ಹಾಸನ, ಬಳ್ಳಾರಿಯ ಜಿಲ್ಲಾ ಕೋರ್ಟ್ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೂ ನ್ಯಾಯಾಲಯ ಕಟ್ಟಡ ನಿರ್ಮಿಸುವ ಕನಸನ್ನು ಬಿಜೆಪಿಯವರು ಹಾಳು ಮಾಡಿದರು. ಮುಂದೆ ಕೆಎಚ್‌ಬಿ ಕಾಲನಿಯಲ್ಲಿನ ಕೋರ್ಟನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಅನೀಸ್ ಪಾಷಾ, ಆವರಗೆರೆ ಪರಮೇಶ, ರಾಮಚಂದ್ರ ಕಲಾಲ್, ಬಿ.ಎಂ.ಹನುಮಂತಪ್ಪ, ಲೋಕಿಕೆರೆ ಪ್ರದೀಪ್, ರಂಗಸ್ವಾಮಿ, ಭಾಗ್ಯಲಕ್ಷ್ಮೀ, ಲಕ್ಕಪ್ಪ, ರಜ್ವಿಖಾನ್, ಜಗದೀಶ್, ಶಿವಾನಂದಪ್ಪ, ಬಸವರಾಜ್, ವಿ.ಗೋಪಾಲ್, ನಜೀರ್, ಶ್ಯಾಮ್, ಅಬ್ದುಲ್ ಖಾದರ್, ಎ.ಎಂ.ಹೆಗಡೆ, ಗುರುಬಸವರಾಜ್ ಇದ್ದರು.