ಜಿಲ್ಲಾ ಮಟ್ಟದ ವಕಾಲತ್ತಿನ ಸಭೆ

vak.jpg
Published on

ದಾವಣಗೆರೆ : ಭಾರತದ ಎಲ್ಲ ನಾಗರಿಕರಿಗೆ ಸಂವಿಧಾನದಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಲೈಂಗಿಕ ಕಾರ್ಯಕರ್ತರಿಗೂ ಇದ್ದು, ಅವರಿಗೂ ಅವನ್ನು ಅನುಭವಿಸುವ ಹಕ್ಕು ಇದೆ ಎಂದು ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.  ನಗರದ ಪಿ.ಬಿ.ರಸ್ತೆಯ ಅಶೋಕ ಇನ್ ಹೊಟೇಲ್‌ನಲ್ಲಿ ಶ್ರೀ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದಿಂದ ಬುಧವಾರ ಆಯೋಜಿಸಿದ್ದ  ಜಿಲ್ಲಾ ಮಟ್ಟದ ವಕಾಲತ್ತಿನ ಸಭೆ ಉದ್ಘಾಟಿಸಿ ಮಾತನಾಡಿದರು.  ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು, ಅವರನ್ನು ಮೌಖಿಕವಾಗಿ ಮತ್ತು ದೈಹಿಕವಾಗಿ ನಿಂದಿಸಬಾರದು, ಹಿಂಸೆಗೆ ಒಳಪಡಿಸಬಾರದು ಎಂದು ತಿಳಿಸಿದರು.  2022ರಲ್ಲಿ ಸುಪ್ರೀಂಕೋರ್ಟ್ ಲೈಂಗಿಕ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ಸಲುವಾಗಿ ಸಮಿತಿ ಸ್ಥಾಪಿಸಿ ಆದೇಶಿಸಿರುವುದನ್ನು ಎಲ್ಲರೂ ಗಮನಿಸಬೇಕು. ಸುಪ್ರೀಂಕೋರ್ಟ್ ಸಮಿತಿ ಮಾಡಿದ ಕೆಲವು ಶಿಫಾರಸುಗಳಿಗೆ ಸರ್ಕಾರಗಳು ಒಪ್ಪಿಗೆಯನ್ನು ನೀಡಿವೆ ಎಂದರು.  ಲೈಂಗಿಕ ಕಾರ್ಯಕರ್ತರು ತಮ್ಮ ಆರೋಗ್ಯ ಮತ್ತು ಸುರಕ್ಷತೆಗಾಗಿ ಬಳಸಿಕೊಳ್ಳುವ ಕ್ರಮಗಳನ್ನು ಅಪರಾಧವೆಂದು  ಪರಿಗಣಿಸಬಾರದು. ಎಲ್ಲ ಇಲಾಖೆಗಳಿಗೆ ಮತ್ತು ಸಾರ್ವಜನಿಕರಿಗೆ ಲೈಂಗಿಕ ಕಾರ್ಮಿಕರ ಸಮುದಾಯವು ಎದುರಿಸುತ್ತಿರುವ ಸವಾಲುಗಳ ಬಗ್ಗೆ, ಅವರು ಅನುಭವಿಸುತ್ತಿರುವ ಕಿರುಕುಳ, ಹಿಂಸೆಗಳ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡಲು ಮತ್ತು ಪರಿಹಾರ ದೊರಕಿಸಲು ಇಲಾಖೆಗಳು ಕಾರ್ಯಕ್ರಮ ಆಯೋಜಿಸಬೇಕಾಗಿದೆ ಎಂದು ತಿಳಿಸಿದರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಭಾರತ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಘನತೆಯಿಂದ ಬದುಕುವ ಹಕ್ಕನ್ನು ಎಲ್ಲರಿಗೂ ನೀಡಿದ್ದು, ಸಮಾಜ ಲೈಂಗಿಕ ಕಾರ್ಯಕರ್ತರನ್ನು, ಏಡ್ಸ್ ಪೀಡಿತರನ್ನು, ಮಂಗಳಮುಖಿಯರನ್ನು ಕೂಡ ಸಂವಿಧಾನದ ಆಶಯದಂತೆ ಸಮಾನತೆಯಿಂದ ಕಾಣಬೇಕು ಎಂದು ಹೇಳಿದರು.  ಲೈಂಗಿಕ ಕಾರ್ಯಕರ್ತರ, ಮಂಗಳಮುಖಿಯರ ಸಮಸ್ಯೆ ಪರಿಹರಿಸುವ ಹೊಣೆ ಸರ್ಕಾರ ಮತ್ತು ಸಮುದಾಯಗಳ ಮೇಲಿದೆ. ಅವರ ಹಕ್ಕುಗಳನ್ನು ರಕ್ಷಿಸುವುದು, ಪುನರ್ವಸತಿ ಕಲ್ಪಿಸುವುದು, ಸಮಾಜದಲ್ಲಿ ಉತ್ತಮ ಶಿಕ್ಷಣ ನೀಡಿ, ಅವರು ಇತರರಂತೆ ಪ್ರಗತಿಹೊಂದಲು ಬೇಕಾದ ಯೋಜನೆಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ತಿಳಿಸಿದರು.  ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಎ.ಪಿ. ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿರುವ ಲೈಂಗಿಕ ಕಾರ್ಯಕರ್ತರು, ಏಡ್ಸ್‌ಪೀಡಿತರು ಮತ್ತು ಸಲಿಂಗಿಗಳ ಬಗ್ಗೆ ನಿರಂತರವಾದ ಅಧ್ಯಯನವನ್ನು ನಡೆಸುತ್ತಿದ್ದು, ಅವರ ಹಕ್ಕುಗಳ ಬಗ್ಗೆ ಮತ್ತು ಅವರ ಪರವಾಗಿರುವ ಕಾನೂನುಗಳು ಮತ್ತು ಯೋಜನೆಗಳ ಬಗ್ಗೆ ತಿಳಿಸುವ ಕೆಲಸ ಮತ್ತು ಶೋಷಣೆಯಿಂದ ರಕ್ಷಿಸುವ ಕಾರ್ಯವನ್ನು ನಿಯಂತ್ರಣ ಘಟಕದ ಅಡಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂಜುಳಾ, ಸಂಘಟನೆಯ ರಾಜಶ್ರೀನಿವಾಸ್, ಮುಕ್ತಾ ಪೂಜಾರ್,  ವಿಜಯಲಕ್ಷ್ಮೀ ಇದ್ದರು.  ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಆಪ್ತ ಸಮಾಲೋಚಕ ಡಾ. ಗುರು ಸವಣೂರು ಸ್ವಾಗತಿಸಿದರು. ಸಂಘಟನೆಯ ಸಮುದಾಯ ಮಹಿಳೆ ಜ್ಯೋತಿ ಪ್ರಾಸ್ತಾವಿಕ ಮಾತನಾಡಿದರು, ರೇಣುಕಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net