ಮಲೇಬೆನ್ನೂರಿನಲ್ಲಿ 27 ರಂದು ಜನತಾ ಅದಾಲತ್

VINAYAKUMAR-B.G-1.jpg
Published on

ದಾವಣಗೆರೆ :  ಹೊಸಪೇಟೆ - ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ವಾಭಿಮಾನಿ ಬಳಗದಿಂದ ಹರಿಹರ ತಾಲೂಕು ಮಲೇಬೆನ್ನೂರು ಬಸ್ ನಿಲ್ದಾಣದ ಎದುರು ಜ. 27 ರಂದು ಬೆಳಗ್ಗೆ 10 ಗಂಟೆಗೆ ಸಾರ್ವಜನಿಕ ಜನತಾ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದರು.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ, ಕಿರು ಪಾದಯಾತ್ರೆ ನಡೆಸಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅವರ ಕರ್ತವ್ಯ ನೆನಪಿಸಲಾಗುವುದು ಎಂದು ತಿಳಿಸಿದರು.  ಹೊಸಪೇಟೆ ಶಿವಮೊಗ್ಗ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಅಪಘಾತಗಳಾಗುತ್ತಿದ್ದು ಸಾವು, ನೋವು ಸಂಭವಿಸುತ್ತಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹೊನ್ನಾಳಿ ಮತ್ತು ಹರಿಹರ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಶಾಸಕರು ಆಯ್ಕೆಯಾಗಿದ್ದರೂ ಹೆದ್ದಾರಿಯ ಅಗಲೀಕರಣದ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ದೂರಿದರು.  ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆಯು 30-35 ಹಳ್ಳಿಗಳಿಗೆ ನೀರೊದಗಿಸುವ ಉಪಯುಕ್ತ ಯೋಜನೆಯಾಗಿದೆ. ಇದರ ಅನುಷ್ಠಾನಕ್ಕೆ ಆಗ್ರಹಿಸಿ 2 ದಶಕಗಳಿಂದ ಹೋರಾಟ ನಡೆಯುತ್ತಿದ್ದು ಇದುವರೆಗೂ ಅನುದಾನ ಬಿಡುಗಡೆ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.  ಹರಿಹರ ತಾಲೂಕಿನ ಕೃಷಿ ಮಾರುಕಟ್ಟೆ ನಿಷ್ಕ್ರಿಯವಾಗಿದೆ. ಕೊಮಾರನಹಳ್ಳಿ, ಜಿ.ಟಿ. ಕಟ್ಟೆ, ಕೊಂಡಜ್ಜಿ ಕೆರೆಗಳು ಸೇರಿದಂತೆ ತಾಲೂಕಿನ ಕೆರೆಗಳಲ್ಲಿ ಹೂಳೆತ್ತುವ ಹಾಗೂ ನೀರು ತುಂಬಿಸುವ ಕೆಲಸ ಆಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್‌ಗಳ ಸೌಕರ್ಯವಿಲ್ಲ. ಇದರಿಂದ ರೈತರು, ಮಹಿಳೆಯರು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದರು.  ಗ್ರಾಮೀಣ ಪ್ರದೇಶಗಳಲ್ಲಿ ಜ್ಞಾನಾರ್ಜನೆಗಾಗಿ ಆರಂಭಿಸಿದ್ದ ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಹರಿಹರ ತಾಲೂಕಿನಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆಯ ಅಗತ್ಯವಿದೆ ಎಂದು ಸಮಸ್ಯೆಗಳನ್ನು ಪಟ್ಟಿ ಮಾಡಿದರು.  ಸಾರ್ವಜನಿಕರ ಅಹವಾಲುಗಳನ್ನು ಪಡೆದು, ಸಂಬಂಧಪಟ್ಟವರಿಗೆ ಸಮಸ್ಯೆಗಳನ್ನು ಬಗೆಹರಿಸುವಂತೆ, ಒತ್ತಾಯಗಳ ಮನವಿ ಸಲ್ಲಿಸಲಾಗುವುದು.  ಜನರ ತೆರಿಗೆ ಹಣ ಅಭಿವೃದ್ಧಿಗೆ ಬಳಕೆಯಾಗಬೇಕು. ಅದಕ್ಕಾಗಿ ತಾಲೂಕಿಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ, ಖರ್ಚಾದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದು ಸಾರ್ವಜನಿಕರ ಮುಂದೆ ಇಡಲಾಗುವುದು ಎಂದು ಹೇಳಿದರು.  ಬಳಗದ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಶೆಟ್ಟರ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ರಾಜ್ಯ ಸಂಚಾಲಕರಾದ ಮಹಮ್ಮದ್ ಸಾದಿಕ್, ಎಸ್. ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net