

ದಾವಣಗೆರೆ : ಮೂರು ತಿಂಗಳಿಂದ ವೇತನ ಸಿಗದೇ ಕುಟುಂಬ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಮನನೊಂದ ಅಂಗನವಾಡಿ ಸಹಾಯಕಿಯೊಬ್ಬರು ಆ್ಯಸಿಡ್ ಸೇವಿಸಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಇಲ್ಲಿನ ಕೆಟಿಜೆ ನಗರ ಡಾಂಗೆ ಪಾರ್ಕ್ ಆವರಣದ ‘ಎಫ್’ ಕೇಂದ್ರದಲ್ಲಿ ಕೆಲಸ ಮಾಡುವ ಭಾರತಿ, ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕಿದ್ದು ಅದಕ್ಕಾಗಿ ಸರ್ಕಾರದಿಂದ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ. ಭಾರತಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಆಟೋ ಚಾಲಕರಾಗಿದ್ದು 5 ಜನ ಮಕ್ಕಳಿದ್ದಾರೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆಯ ದೈನಂದಿನ ಖರ್ಚುಗಳನ್ನು ತೂಗಿಸಿಕೊಂಡು ಹೋಗುವುದು ಕಠಿಣವಾಗಿದೆ. ತಿಂಗಳಿಗೆ 6500 ರೂ. ಸಂಬಳ ಸಿಗಬೇಕು. 3 ತಿಂಗಳಿಂದ ವೇತನ ಬಾರದೇ ಕಂಗಾಲಾಗಿ, ವಾರದ ಹಿಂದೆ ಮನೆಯಲ್ಲಿ ಆ್ಯಸಿಡ್ ಸೇವನೆ ಮಾಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಅವರನ್ನು ಕುಟುಂಬದ ಸದಸ್ಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆ್ಯಸಿಡ್ ಕುಡಿದಿದ್ದರಿಂದ ಅನ್ನನಾಳ ಸುಟ್ಟಿದೆ, ಆಹಾರ ಸೇವನೆ ಮಾಡಲು ಆಗುತ್ತಿಲ್ಲ. ಗ್ಲುಕೋಸ್ ಮೇಲೆಯೇ ಅವಲಂಬನೆಯಾಗಿದ್ದಾರೆ. ಭಾರತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕಿದೆ. ಆದರೆ ಅಲ್ಲಿ 40 ಸಾವಿರ ರೂ. ಠೇವಣಿ ಇಡಬೇಕು. ದಿನಕ್ಕೆ 18-20 ಸಾವಿರ ರೂ. ಐಸಿಯು ವಾರ್ಡ್‌ಗೆ ವೆಚ್ಚವಾಗುತ್ತದೆ. ಅಷ್ಟನ್ನು ಭರಿಸುವ ಸಾಮರ್ಥ್ಯ ಕುಟುಂಬದವರಿಗೆ ಇಲ್ಲವಾಗಿದೆ. ಕಾರ್ಮಿಕ ಮುಖಂಡ ಆವರಗೆರೆ ವಾಸು ಆಸ್ಪತ್ರೆಗೆ ಭೇಟಿ ನೀಡಿ ಭಾರತಿ ಅವರಿಗೆ ಧೈರ್ಯ ತುಂಬಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಿ, ವೈಯಕ್ತಿಕವಾಗಿ 5 ಸಾವಿರ ರೂ. ನೀಡಿದ್ದು ಬಿಟ್ಟರೆ ಹೆಚ್ಚಿನ ನೆರವು ದೊರಕಿಲ್ಲ. ಜಿಲ್ಲಾಸ್ಪತ್ರೆಯಲ್ಲಿರುವ ಸಖಿ ಕೇಂದ್ರದಿಂದ 25 ಸಾವಿರ ರೂ. ನೀಡಲು ಅವಕಾಶವಿದೆ. ಆ ಹಣ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಸಹಿ ಮಾಡಿಸಿಕೊಂಡು ಹೋಗಿದ್ದಾರೆ, ಆದರೆ ಇದುವರೆಗೂ ಹಣ ಬಂದಿಲ್ಲ. ಸೋಮವಾರ ಅವರ ಖಾತೆಗೆ ಜಮಾ ಆಗಲಿದೆ ಎನ್ನಲಾಗುತ್ತಿದೆ. ... (ಬಾಕ್ಸ್) ಸಾಲದ ಹೊರೆ, ಕೆಲಸದ ಒತ್ತಡ ಭಾರತಿ ಅವರು ಕುಟುಂಬ ನಿರ್ವಹಣೆಗೆ ವಿವಿಧೆಡೆ ಸಾಲ ಮಾಡಿದ್ದು ಅದನ್ನು ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಆಟೋ ಓಡಿಸುವ ಪತಿಯ ಆದಾಯವೂ ಅಷ್ಟಕ್ಕಷ್ಟೇ ಇರುವುದರಿಂದ ಮನೆಯ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದು ಹೇಗೆ ಎಂದು ಭಾರತಿ ಆತಂಕಗೊಂಡಿದ್ದರು. ಜತೆಗೆ ಕೆಲಸದ ಒತ್ತಡವೂ ಇರುವುದರಿಂದ ಅವರು ಆತ್ಮಹತ್ಯೆಗೆ ಯತ್ನಿಸಿದರು ಎಂದು ತಿಳಿದು ಬಂದಿದೆ. ‘ಅಂಗನವಾಡಿ ಸಹಾಯಕಿಗೆ 3 ತಿಂಗಳಿಂದ ಸಂಬಳ ನೀಡಿಲ್ಲ. ಇದರಲ್ಲಿ ಇಲಾಖೆಯ ನ್ಯೂನತೆಯಿದೆ. ಇಷ್ಟೆಲ್ಲ ಆಗಲು ಇಲಾಖೆ ಹಾಗೂ ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ. ಇದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಸಂಚಾಲಕ ಆವರಗೆರೆ ವಾಸು ಎಚ್ಚರಿಕೆ ನೀಡಿದ್ದಾರೆ