ದಾವಣಗೆರೆ ಬಳಿ ಅಪಘಾತ, 17 ಮಂದಿಗೆ ಗಾಯ

bus.jpg
Published on

ದಾವಣಗೆರೆ: ಬೆಳಗಾವಿಯ ಸುವರ್ಣ ಸೌಧದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಮಾದಿಗ ದಂಡೋರ qq ಖಾಸಗಿ ಬಸ್ ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಬೆಳಗಿನ ಜಾವ ಅಪಘಾತಕ್ಕೀಡಾಗಿ 17 ಮಂದಿ ಗಾಯಗೊಂಡಿದ್ದಾರೆ.
 ಗಾಯಾಳುಗಳು ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿಯವರು. ಅವರ ಕೈ, ಕಾಲು, ತಲೆಗೆ ಪೆಟ್ಟಾಗಿದ್ದು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಎ.ಜೆ. ಸದಾಶಿವ ಆಯೋಗದ ವರದಿಯನ್ನು ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಸೋಮವಾರ ಬೆಳಗ್ಗೆ ಬೆಳಗಾವಿಯ ಸುವರ್ಣ ಸೌಧದ ಎದುರು ರಾಜ್ಯ ಮಾದಿಗ ದಂಡೋರ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
 ಅದರಲ್ಲಿ ಭಾಗವಹಿಸಲು ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿಯಿಂದ ಸಂಘಟನೆಯ ಪ್ರಮುಖರು ಬಸ್‌ನಲ್ಲಿ ಹೊರಟಿದ್ದರು. ಸೋಮವಾರ ಬೆಳಗಿನ ಜಾವ ದಾವಣಗೆರೆ ಹೊರ ವಲಯದಲ್ಲಿ ಅವರು ಪ್ರಯಾಣಿಸುತ್ತಿದ್ದ ಬಸ್ ಮತ್ತು ಲಾರಿ ನಡುವೆ ಅಪಘಾತವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
 ಅಪಘಾತ ನಡೆದ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಮತ್ತು ಇತರರು ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net