ರಸ್ತೆ ಅಪಘಾತದಲ್ಲಿ ಕೇರಳದ ಇಬ್ಬರು ಯುವಕರು ಸಾವು

apaghata.jpg
Published on

ದಾವಣಗೆರೆ : ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಎಸ್.ಎಸ್. ಆಸ್ಪತ್ರೆ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸೇತುವೆ ಗೋಡೆಗೆ ಬೈಕ್ ಡಿಕ್ಕಿಯಾಗಿ ಕೇರಳದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
 ಕೇರಳದ ಪಾಲಕ್ಕಾಡ್‌ನ ಅತುಲ್ ಮತ್ತು ಹೃಷಿಕೇಶ್ ಮೃತಪಟ್ಟವರು. ಇಬ್ಬರೂ ಅಂದಾಜು 30-35 ವರ್ಷದವರು. ಗೋವಾ ಕಡೆಯಿಂದ ಬೆಂಗಳೂರಿನತ್ತ ಹೊರಟಿದ್ದರು. ವೇಗವಾಗಿ ಬರುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಬೈಕ್, ಎಸ್.ಎಸ್. ಆಸ್ಪತ್ರೆಗೆ ಸಮೀಪದಲ್ಲಿ ರೈಲ್ವೆ ಕೆಳಸೇತುವೆ ಬಳಿ ಹೆದ್ದಾರಿಯಲ್ಲಿದ್ದ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ.
 ಡಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರೂ ನಿಯಂತ್ರಣ ತಪ್ಪಿ ಪಕ್ಕದಲ್ಲಿ 15 ಅಡಿಯಷ್ಟು ಕೆಳಗೆ ಉರುಳಿ ರೈಲ್ವೆ ಹಳಿಯ ಬಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಬೈಕ್ ಹೆದ್ದಾರಿಯಲ್ಲಿ ನೂರು ಅಡಿಗಳಷ್ಟು ದೂರಕ್ಕೆ ಹೋಗಿ ಬಿದ್ದಿದೆ ಎಂದು ಅಪಘಾತದ ಭೀಕರತೆಯನ್ನು ಪೊಲೀಸರು ವಿವರಿಸಿದರು.
 ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ವಾಹನ ಘಟನಾ ಸ್ಥಳಕ್ಕೆ ಹೊರಟಿತ್ತು. ಅದೇ ವೇಳೆ ಆ ಮಾರ್ಗವಾಗಿ ಮತ್ತೊಂದು ಕಾರು ಬರುತ್ತಿತ್ತು. ಕಾರ್ ಚಾಲಕ ಅಲ್ಲಿ ಲೇನ್ ಬದಲಿಸಿ ರಸ್ತೆ ಮಧ್ಯಕ್ಕೆ ಬಂದಾಗ, ಸ್ವಲ್ಪ ಹೊತ್ತಿನ ಕೆಳಗೆ ಅಪಘಾತಕ್ಕೊಳಗಾಗಿ ಬಿದ್ದಿದ್ದ ಬೈಕ್‌ಗೆ ಕಾರು ಡಿಕ್ಕಿಯಾಗಿ ಅದರಲ್ಲಿದ್ದ ನಾಲ್ವರ ಪೈಕಿ ಮಹಿಳೆಯೊಬ್ಬರು ಗಾಯಗೊಂಡರು.
 ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net