ಮನೆಯ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು: ಶುಭ

karayagara
Published on

ಮಡಿಕೇರಿ: ಪ್ರತಿ ಮನೆಯ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ೨೦೨೪-೨೫ನೇ ಸಾಲಿನ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-೨೦೦೫ ಹಾಗೂ ನಿಯಮ-೨೦೦೬ರ ಅನುಷ್ಟಾನದಲ್ಲಿ ಭಗಿದಾರ ಇಲಾಖೆಗಳ ಪಾತ್ರ ಕುರಿತು ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆದ ಓರಿಯಂಟೇಷನ್ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಹೆಣ್ಣು ಮಕ್ಕಳು ಪೂಜಿಸಲ್ಪಡುವವರಾಗಿದ್ದು, ಇವರಲ್ಲಿ ಅಷ್ಟದೇವತೆಗಳು ನೆಲೆಸುತ್ತಾರೆ. ಪ್ರತಿ ಮನೆಯ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು, ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂದು ಹೇಳಿದರು.

ಸ್ತ್ರೀಶಕ್ತಿ ಒಕ್ಕೂಟದ ರಾಜ್ಯಧ್ಯಕ್ಷ ರೆಹನಾ ಸುಲ್ತಾನ ಮಾತನಾಡಿ, ಮಹಿಳೆಯರು ಮನೆಯಿಂದ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಹಿಳೆಯರು ಸಮಾಜ ಸೇವೆಗೆ ಹೆಚ್ಚು ಒತ್ತು ನೀಡಿ ಸಮಾಜ ಸೇವೆಯಲ್ಲಿ ತೊಡಗೋಣ ಎಂದು ಹೇಳಿದರು.

ಪೊನ್ನಂಪೇಟೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂಣಚ್ಚ ಮಾತನಾಡಿ, ತಾಲೂಕು ಮಟ್ಟದಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನಃಶಾಸ್ತ್ರಜ್ಞಯಾದ ಡಾ.ಯಾಮಿನಿ ಮಾತನಾಡಿ, ಮಹಿಳೆಯರು ಇಂದು ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿದೆ. ಆರ್ಥಿಕವಾಗಿ ಸಬಲರಾಗಿದ್ದು, ಅಲ್ಲದೆ ಸಹನಾಮಯಿಯಾಗಿರುವುದು ನಾವು ಕಾಣಬಹುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ ಮಾತನಾಡಿ, ಮಹಿಳೆಯರಿಗೆ ಕಾನೂನಾತ್ಮಕ ಅಂಶಗಳು, ಆರೋಗ್ಯ ಸೇವೆಗಳು, ಕೌಟುಂಬಿಕ ದೌರ್ಜನ್ಯ ಈ ಎಲ್ಲಾ ಮಾಹಿತಿಯನ್ನು ತಿಳಿಸಲು ಕಾರ್ಯಗಾರ ಏರ್ಪಡಿಸಲಾಗಿದೆ. ಎಲ್ಲಾ ತರಬೇತುದಾರರು ಈ ಸೌಲಭ್ಯವನ್ನು ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ವಕೀಲರು ಮೀನಕುಮಾರಿ ಮಾತನಾಡಿ, ಮಕ್ಕಳ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ದೌರ್ಜನ್ಯ ತಡೆ ಕಾಯ್ದೆ ೨೦೧೩ರ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾದ ಪೋಲಿಸ್ ಇಲಾಖೆಯ ಸುಮತಿಯವರು ಮಾತನಾಡಿ, ಮಹಿಳೆಯರಿಗೆ ಯಾವುದೇ ರೀತಿಯ ಸಮಸ್ಯೆಗಳಾದ್ದಲ್ಲಿ ೧೧೨ ಗೆ ಕರೆ ಮಾಡಬೇಕು. ಮಹಿಳೆಯರು, ಹೆಣ್ಣು ಮಕ್ಕಳು ಜಾಗ್ರತೆಯಿಂದ ಇರಬೇಕು. ಮೊಬೈಲ್ ಚಟಕ್ಕೆ ಬಲಿಯಾಗಿ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಸಂಸಾರೀಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಆದರೆ, ಸರ್ಕಾರ ಮಹಿಳೆಯರ ರಕ್ಷಣೆ ಮತ್ತು ಸುಭದ್ರತೆಗೆ ಹಲವಾರು ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೊಳಿಸಿದ್ದು, ಅವುಗಳಲ್ಲಿ ಮಹಿಳಾ ಸಾಂತ್ವನಾ, ಮಹಿಳಾ ಸಹಾಯವಾಣಿ, ಮಹಿಳಾ ಸಬಲೀಕರಣ ಘಟಕ, ಸಖಿ ಸೆಂಟರ್ ಇವುಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತ, ಪ್ರಮುಖರಾದ ಜಯಂತಿ, ಕುಮುದ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net