ಹೆಣ್ಣು ಮಕ್ಕಳು ಕೊಡವ ಸಂಸ್ಕೃತಿಯ ಆಸ್ತಿ: ಕಾವೇರಪ್ಪ ಸುಬ್ರಮಣಿ

pommakkada parishath
Published on

ಮಡಿಕೇರಿ: ಹೆಣ್ಣು ಮಕ್ಕಳು ಕೊಡವ ಸಂಸ್ಕೃತಿಯ ಆಸ್ತಿ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕಾವೇರಪ್ಪ ಸುಬ್ರಮಣಿ ಹೇಳಿದರು.

ಅಖಿಲ ಕೊಡವ ಸಮಾಜ ವಿರಾಜಪೇಟೆ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವತಿಯಿಂದ ಸಮಾಜದ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಣ್ಣು ಮಕ್ಕಳು ಕೊಡವ ಸಂಸ್ಕೃತಿಯ ಆಸ್ತಿ. ಹೆಣ್ಣು ಮನೆಯನ್ನು ರೂಪಿಸುವ ಸಂಸ್ಕಾರದಿಂದಲೇ ಆ ಮನೆ ಸ್ವರ್ಗವಾಗುತ್ತದೆ. ನಮ್ಮ ಮಹಿಳೆಯರು ಇಂದಿನ ಕಾಲಘಟದಲ್ಲಿಯೂ ನಮ್ಮ ಮನೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಬಣ್ಣಿಸಿದರು.

ಮಹಿಳೆಯರ ಆರ್ಥಿಕತೆ ನಿರ್ವಹಣೆಯ ಕಲೆಯೂ ಎಲ್ಲರಿಗೂ ಮಾದರಿಯಾಗಿದೆ. ಕುಟುಂಬವನ್ನು ನಿರ್ವಹಿಸಿಕೊಂಡು ಹೋಗುವ ಮಹಿಳೆಯ ಪಾತ್ರ ಸದಾ ಸ್ಮರಣೀಯ. ಇದರೊಂದಿಗೆ ನಮ್ಮಲ್ಲಿ ಹೆಚ್ಚಾಗುತ್ತಿರುವ ವಿವಾಹ ವಿಚ್ಛೇದನ ತಡೆಗೆ ನಾವೂ ಕ್ರಮ ವಹಿಸಬೇಕಿದೆ. ಹಲವು ಸಂಸಾರ ಬಿರುಕು ಕಾಣಿಸಿಕೊಳ್ಳುವುದನ್ನು ತಪ್ಪಿಸಬೇಕು ಎಂದರು.

ಪೊಮ್ಮಕ್ಕಡ ಪರಿಷತ್ ಕಾರ್ಯದರ್ಶಿ ಮಂಡೆಪಂಡ ಗೀತಾ ಮಂದಣ್ಣ ಅವರು, ಪೊಮ್ಮಕ್ಕ ಬೊಳಂದಂಡ್ ಬಂದನಕ್ಕೆ ಅಯಿಂಗಡ ಬದ್ಕ್ಲ್ ಆನ ವ್ಯತ್ಯಾಸ (ಹೆಣ್ಣು ಮಕ್ಕಳು ಬೆಳೆದು ಬಂದ ಹಾಗೇ ಅವರ ಬದುಕಿನಲ್ಲಿ ಆದ ವ್ಯತ್ಯಾಸ) ಎನ್ನುವ ವಿಚಾರದ ಕುರಿತು ವಿಚಾರ ಮಂಡಿಸಿ, ಮಹಿಳೆಯರು ಹಿಂದಿನ ಕಾಲದಲ್ಲಿ ಅನೇಕಾನೇಕ ಕಟ್ಟುಪಾಡಿನ ನಡುವೆ ಶ್ರಮದ ಜೀವನ ನಡೆಸುತ್ತಿದ್ದರು. ಅದರೂ ಮಹಿಳೆಯರಿಗೆ ಮನೆಯಲ್ಲಿ ಹಕ್ಕುಗಳನ್ನು ನೀಡಲಾಗುತ್ತಿತ್ತು. ಆದರೆ, ಇಂದು ಜಗತ್ತು ಬದಲಾಗುತ್ತಿದ್ದಂತೆ ಹೆಣ್ಣುಮಕ್ಕಳ ಬದುಕಿನಲ್ಲಿ ಅನೇಕ ಬದಲಾವಣೆ ಆಗಿದೆ. ವಿದ್ಯಾಭ್ಯಾಸ ಸೇರಿದಂತೆ ನಾನಾ ಕಾರಣದಿಂದ ಹೊರದೇಶದಲ್ಲಿ ನೆಲೆಸಿರುವವರೂ ಸೇರಿದಂತೆ ಹಲವು ಹೆಣ್ಣು ಮಕ್ಕಳು ನಮ್ಮ ಆಚಾರ ವಿಚಾರಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ವಿಷಾಧಿಸಿದರು.

ಕೊಡವರಲ್ಲಿ ಹೆಣ್ಣು ಮಕ್ಕಳಿಗೆ ಗೌರವ, ಸ್ವಾತಂತ್ರ್ಯ, ಹಕ್ಕು ಎಲ್ಲವೂ ಇದೆ. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ನಮ್ಮ ಆಚಾರ ವಿಚಾರಗಳನ್ನು ಅಲ್ಲಗಳೆಯುತ್ತಿರುವ ಸಂಗತಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪೊಮ್ಮಕ್ಕಡ ಪರಿಷತ್ ವತಿಯಿಂದ ಸನ್ಮಾನ ಸ್ವೀಕರಿಸಿ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಇತ್ತಿಚೇಗೆ ಕೊಡವರ ಅಸ್ತಿತ್ವಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ಎಲ್ಲ ಕೊಡವ ಸಂಘಟನೆಯವರು ಸೈನಿಕ ಶಿಸ್ತಿನಲ್ಲಿ ಕುಟ್ಟದಿಂದ ಮಡಿಕೇರಿವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಇತಿಹಾಸ ಸೃಷ್ಟಿಸಿದರು. ಇಂತಹ ಒಗ್ಗಟ್ಟು, ಸ್ವಾಭಿಮಾನ ನಮ್ಮಲ್ಲಿ ಸದಾ ಇರಬೇಕು. ಹೀಗಾದಲ್ಲಿ ನಮ್ಮನ್ನು ಯಾರೂ ಹೀಗಳೆಯಲು ಸಾಧ್ಯವಿಲ್ಲ. ಇಂತಹ ಇತಿಹಾಸ ಸೃಷ್ಟಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸಂಸಾರದಲ್ಲಿ ಗಂಡ ಹೆಂಡತಿ ಒಗ್ಗಟ್ಟಾಗಿ ಇರಬೇಕು. ಹೀಗಿದ್ದಲ್ಲಿ ಮಾತ್ರ ಸಂಸಾರದ ರಥ ಸಾಗಲು ಸಾಧ್ಯ. ಹಿಂದೆಲ್ಲ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಹಲವು ಕಟ್ಟು ಪಾಡುಗಳಿದ್ದವು. ಬಹಳ ಹಿಂದೆ ಹೆಣ್ಣಿಗೆ ಪೂಜನೀಯ ಸ್ಥಾನವಿತ್ತು. ಮದ್ಯಯುಗದಲ್ಲಿ ಹೆಣ್ಣುಮಕ್ಕಳನ್ನು ನಿಕೃಷ್ಟವಾಗಿ ಕಾಣಲಾಯಿತು. ಕಾಲ ಕ್ರಮೇಣ ಹೆಣ್ಣುಮಕ್ಕಳ ಹೋರಾಟದ ಫಲವಾಗಿ ಕೆಲವು ಸ್ವಾತಂತ್ರ್ಯ ದೊರೆಯಿತು ಎಂದು ಸ್ಮರಿಸಿದರು.

ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಕಷ್ಟಗಳ ಸರಮಾಲೆಯಿಂದ ಬೇಸತ್ತ ಹೆಣ್ಣು ಮಕ್ಕಳ ಹೋರಾಟದ ಫಲವಾಗಿ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ ಎಂದು ಸ್ಮರಿಸಿಕೊಂಡ ಅವರು, ಕೊಡವಾಮೆ ಬಾಳೋ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಸಾಧಿಸಿತು. ಮಹಿಳೆಯರು ಇದಕ್ಕೆ ಬೆನ್ನೆಲುಬಾಗಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಮಳವಂಡ ಪೂವಿ ಮುತ್ತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಹೆಸರು, ಪದ್ಧತಿ, ಆಚರಣೆಗಳು ಕೊಡವಾಮೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಿಂದಲೇ ಪ್ರತಿಯೊಬ್ಬರು ಸಂಸ್ಕಾರ ಕಲಿಯುವಂತಾಗಬೇಕು. ಅದರಲ್ಲೂ ಮಹಿಳೆಯ ಪಾತ್ರ ಅಗಾಧವಾದದು ಎಂದು ಹೇಳಿದರು.

ವೇದಿಕೆಯಲ್ಲಿ ಖಜಾಂಚಿ ಮೂವೇರ ಧರಣಿ ಗಣಪತಿ ಇದ್ದರು. ಪೊಮ್ಮಕ್ಕಡ ಪರಿಷತ್‌ನ ನಿರ್ದೇಶಕರು ಇತರರು ಪಾಲ್ಗೊಂಡಿದ್ದರು. ಪೊಮ್ಮಕ್ಕಡ ಪರಿಷತ್ ಸದಸ್ಯೆ ಬೊಳ್ಳಜೀರ ರಾಧ ಕರುಂಬಯ್ಯ ಪ್ರಾರ್ಥಿಸಿದರೆ, ಕೇಚಟ್ಟಿರ ಕಾಮುಣಿ ಸ್ವಾಗತಿಸಿ, ಕುಂಚೆಟ್ಟಿರ ರೇಶ್ಮಾ ಉತ್ತಪ್ಪ ವಂದಿಸಿದರು. ತಿತೀರ ಉರ್ಮಿಳ ಸೋಮಯ್ಯ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆ

ಕಾರ್ಯಕ್ರಮದ ಅಂಗವಾಗಿ ಚೋದ್ ಚೋದ್ಯ ಹಾಗೂ ಆಶುಭಾಷಣ ಸ್ಪರ್ಧೆ ನಡೆಯಿತು. ಚೋದ್ ಚೋದ್ಯ ಸ್ಪರ್ಧೆಯಲ್ಲಿ ಮಂಡೆಪಂಡ ಸವಿತಾ(ಪ್ರ) ಮುಕ್ಕಾಟೀರ ಉಷಾ ಸೋಮಯ್ಯ ದ್ವಿತೀಯ ಸ್ಥಾನ ಪಡೆದುಕೊಂಡರು. ಆಶುಭಾಷಣ ಸ್ಪರ್ಧೆಯಲ್ಲಿ ಪ್ರಾಥಮ ಸ್ಥಾನವನ್ನು ಬೊಪ್ಪಂಡ ಬೊಳ್ಳಮ್ಮ, ಬೊಳ್ಳಜೀರ ರಾಧ ಕರುಂಬಯ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net