

ಉಡುಪಿ: ಕುಟುಂಬ ಕಲಹದಿಂದ ದೂರವಾಗಿರುವ ತಂದೆಯನ್ನು ನೋಡಲು ಪರಿತಪಿಸುತ್ತಿದ್ದ ಪುತ್ರಿಗೆ ಕೊಲ್ಲೂರು ಪೊಲೀಸರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೆರವಾಗಿದೆ.
ಕೌಟಂಬಿಕ ಕಲಹದಿಂದ ಗಂಡ -ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಎಂಬಲ್ಲಿ ಎರಡು ಮಕ್ಕಳು ತಾಯಿ ನೆಲೆಸಿದ್ದಾರೆ. ಅಪ್ಪನಿಗೆ ಅಪಘಾತವಾಗಿದೆ ಎಂದು ಅಜ್ಜಿ ಮೂಲಕ ಮಾಹಿತಿ ಪಡೆದ 16 ವರ್ಷದ ಬಾಲಕಿ, ಗಾಯಾಳು ತಂದೆಯನ್ನು ನೋಡುವ ಇಚ್ಛೆ ವ್ಯಕ್ತಪಡಿಸಿದಳು. ಸೋಮವಾರ ಪಕ್ಕದ ಮನೆಯ ಪರಿಚಿತರೊಂದಿಗೆ ಹೆಮ್ಮಾಡಿಗೆ ಹೋಗುತ್ತಿದ್ದಾಗ ನಿಟ್ಟೂರು ಕೊಲ್ಲೂರು ಸಮೀಪದ ಚೆಕ್‌ಪೋಸ್ಟ್ ಬಳಿ ಪೊಲೀಸರು ವಿಚಾರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಹಿತಿ ರವಾನಿಸಿದರು.
ತಕ್ಷಣ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕೊಲ್ಲೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಪ್ರಾಪ್ತ ಬಾಲಕಿಯನ್ನು ಸಮಾಲೋಚನೆಗೊಳಪಡಿಸಿದಾಗ 13 ವರ್ಷ ತಂದೆಯನ್ನು ಬಿಟ್ಟಿದ್ದು, ಅವರನ್ನು ನೋಡಲೇಬೇಕು ಎಂದು ಪರಿತಪಿಸುತ್ತಿರುವುದು ತಿಳಿಯಿತು. ತಂದೆಯನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸಲಾಯಿತು. ನಂತರ ತಾಯಿ ಜತೆ ಹೋಗಲು ಬಾಲಕಿ ನಿರಾಕರಿಸಿದ್ದರಿಂದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೊ ಅವರ ಆದೇಶದಂತೆ ನಮ್ಮ ಭೂಮಿ ಕನ್ಯಾನ ಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಪೊಲೀಸ್ ಅಧಿಕಾರಿಯಾಗುವ ಕನಸು: ಈಗ ಎಸ್ಸೆಸ್ಸೆಲ್ಸಿ ಓದುತ್ತಿರುವ ಬಾಲಕಿಗೆ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸು ಹೊಂದಿದ್ದಾಳೆ. ಈಕೆಯ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಕೊಲ್ಲೂರು ಠಾಣೆಯ ಉಪನಿರೀಕ್ಷಕ ನಾಸಿರ್ ಹುಸೈನ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ವಹಿಸಿದ್ದಾರೆ.