

ಕುಶಾಲನಗರ:
ವಿದ್ಯಾರ್ಥಿಗಳು ಕಲಿಕಾ ಹಂತದಲ್ಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಅಧ್ಯಯನದೊಂದಿಗೆ ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕ.ಸಾ.ಪ ಹೆಬ್ಬಾಲೆ ಘಟಕದ ವತಿಯಿಂದ ತಾಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ 69 ನೇ ಕನ್ನಡ ರಾಜ್ಯೋತ್ಸವ ಮತ್ತು ಸಂಪಾಜೆ ದಿ.ಸಣ್ಣಯ್ಯ ಪಟೇಲ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷೆ ಬೆಳವಣಿಗೆಗೆ ಇಂಥ ಕಾರ್ಯಕ್ರಮಗಳು ಸಹಕಾರಿ. ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ಬಿಟ್ಟು ತಮ್ಮನ್ನು ಅಧ್ಯಯನ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಲ್ಲಿ ಸಾಹಿತ್ಯದಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಜಿಲ್ಲಾ ಕ.ಸಾ.ಪ. ಸಮಿತಿ ಸದಸ್ಯ ಎಂ.ಎನ್. ವೆಂಕಟನಾಯಕ್ ಮಾತನಾಡಿ ಇಂಥ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಅಗತ್ಯವಿದೆ.
ಸಾಹಿತ್ಯ ಕ್ಷೇತ್ರ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಸಂಪಾಜೆಯ ಪಟೇಲ್ ಸಣ್ಣಯ್ಯ ಅವರ ಕೊಡುಗೆ ಅಪಾರವಾದುದು ಎಂದು ಹೇಳಿದರು. ತೊರೆನೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಸತ್ಯನಾರಾಯಣ ಮಾತನಾಡಿ, ಇಂಥ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ, ಪ್ರತಿಭೆ ಹೊರಹೊಮ್ಮಿಸಲು ಸಹಕಾರಿಯಾಗಿವೆ ಎಂದರು.
ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್. ನಾಗೇಶ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಕ.ಸಾ.ಪ.ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ ಮಾತನಾಡಿದರು.
ತಾಲೂಕು ಕ.ಸಾ.ಪ. ಪದಾಧಿಕಾರಿಗಳಾದ ಎಂ.ಎನ್. ಕಾಳಪ್ಪ, ಟಿ.ಬಿ. ಮಂಜುನಾಥ್, ಕೋಶಾಧಿಕಾರಿ ಕೆ.ವಿ. ಉಮೇಶ್, ಕ.ಸಾ.ಪ.ಹೆಬ್ಬಾಲೆ ಘಟಕದ ಕಾರ್ಯದರ್ಶಿ ಎಚ್.ಎನ್. ಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ಡಿ.ಕವಿತ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಇದ್ದರು.
ಇದೇ ವೇಳೆ ಕ.ಸಾ.ಪ.ಹೆಬ್ಬಾಲೆ ಘಟಕದ ವತಿಯಿಂದ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತಗೊಂಡವರಿಗೆ ಬಹುಮಾನ ವಿತರಿಸಲಾಯಿತು.