

ಬಳ್ಳಾರಿ: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ಸಂಸ್ಥಾಪಕ ದತ್ತೋಪಂತ ಠೇಂಗಡಿ ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ನಗರದ ಗಾಂಧಿಭವನದಲ್ಲಿ ಮಾ.1ರಂದು ಬೆಳಗ್ಗೆ 11ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜನ್ಮಶತಮಾನೋತ್ಸವ ಸಮಾರಂಭದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
1920ರ ನ.10ರಂದು ಮಹಾರಾಷ್ಟ್ರದಲ್ಲಿ ಜನಿಸಿದ ದತ್ತೋಪಂತ ಠೇಂಗಡಿ ಅವರು, ವಿದ್ಯಾರ್ಥಿ ಜೀವನದಲ್ಲೇ ಸೋಶಿಯಲಿಸ್ಟ್ ರಿಪಬ್ಲಿಕನ್ ಪಾರ್ಟಿಯ ನೇತೃತ್ವ ವಹಿಸಿದ್ದರು. 1941ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕಾಗಿ ಸೇವೆ ಆರಂಭಿಸಿದರು. ಇಂಥ ಮಹಾನ್ ಚಿಂತಕ ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂಬ ಆಶಯದಿಂದ ಅವರ ಜನ್ಮಶತಮಾನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಗಪುರದ ಆರ್‌ಎಸ್‌ಎಸ್‌ನ ಅಖಿಲ ಭಾರತ ವ್ಯವಸ್ಥಾಪಕ ಪ್ರಮುಖರಾದ ಮಂಗೇಶ ಭಂಡೇ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕೇಂದ್ರ ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ, ಸಚಿವ ಬಿ.ಶ್ರೀರಾಮುಲು, ಸಂಸದ ವೈ.ದೇವೇಂದ್ರಪ್ಪ ಸೇರಿ ಇತರರು ಭಾಗವಹಿಸುವರು. ಕಾರ್ಯಕ್ರಮಕ್ಕೂ ಮುನ್ನ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಗರದ ಪ್ರಮುಖ ಬೀದಿಯ ಮೂಲಕ ಸಾಗಿ ಗಾಂಧಿಭವನ ತಲುಪಲಿದೆ ಎಂದರು. ಸ್ವಾಗತ ಸಮಿತಿಯ ಸಂಚಾಲಕ ಅನಿಲ್ ಮೋಕಾ, ನಾಗರಾಜರಾವ್, ಮನೋಹರ್, ಗಣಪಾಲ್ ಐನಾಥ ರೆಡ್ಡಿ, ಲಕ್ಷ್ಮಿಕಾಂತ ರೆಡ್ಡಿ, ಮಾರುತಿ ಪ್ರಸಾದ್ ಇದ್ದರು.