

ಚಿಕ್ಕಮಗಳೂರು: ಐ.ಡಿ.ಪೀಠದಲ್ಲಿ ಡಿ.27 ರಿಂದ ರಿಂದ 29ರವರೆಗೆ ನಡೆಯಲಿರುವ ದತ್ತಜಯಂತಿ ಪ್ರಯುಕ್ತ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್‍ನಿಂದ ಶನಿವಾರ ಮಾಲಾಧಾರಣೆ ಕಾರ್ಯಕ್ರಮ ನಡೆಯಿತು.
ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಅವರ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ದತ್ತಭಕ್ತರು ಶನಿವಾರ ಮಾಲಾಧಾರಣೆ ಮಾಡಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಸಹ ಮಾಲಾಧಾರಣೆ ಮಾಡಿದರು.
ಬಜರಂಗದಳದ ದಕ್ಷಿಣ ಪ್ರಾಂತ ಶಾರೀರಿಕ್ ಪ್ರಮುಖ್ ರಂಗನಾಥ್, ವಿಶ್ವ ಹಿಂದು ಪರಿಷತ್‍ನ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಮುಖಂಡರಾದ ಯೋಗೇಶ್ ರಾಜ್ ಅರಸ್, ಬಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಹೆರೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುರೋಹಿತ ರಘು ಅವಧಾನಿ ನೇತೃತ್ವದಲ್ಲಿ ಬೆಳಗ್ಗಿನಿಂದ ದತ್ತಹೋಮ ಮತ್ತಿತರ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ದತ್ತಭಕ್ತರು ದೇವಾಲಯದ ಆವರಣದಲ್ಲಿ ಬೆಳಗ್ಗಿನಿಂದಲೇ ಭಜನೆಯಲ್ಲಿ ನಿರತರಾಗಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ಸಹ ದತ್ತಭಕ್ತರು ದತ್ತಮಾಲಾಧಾರಣೆ ಮಾಡಿದರು.