

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಶನಿವಾರ ಏರ್ಪಡಿಸಲಾಗಿತ್ತು.
ಲಿಂಗೈಕ್ಯ ಶರಣೆ ಲೀಲಾ ಕರವೀರಶೆಟ್ಟರ್, ಚನ್ನಮ್ಮ ಮುಳ್ಳಳ್ಳಿ, ವಿಮಲಾದೇವಿ ಪಂಚಾಂಗಮಠ, ನೀಲಮ್ಮ ನರವಣಿ, ನಿಂಗವ್ವ ಕಬ್ಬೂರ್, ಈರಮ್ಮ ಮೆಣಸಿನಕಾಯಿ, ಶಕುಂತಲಾ ಶಿರೂರ, ಮಹಾನಂದ ಯಳಮಲಿ, ಡಾ. ಪ್ರಮೀಳಾ ಯಳಮಲಿ, ಲೀಲಕ್ಕ ಅಂಗಡಿ ಇವರುಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹು-ಧಾ ಉಪ ಪೊಲೀಸ್ ಆಯುಕ್ತ ರವೀಶ್ ಸಿ.ಆರ್. ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಶಕ್ತಿ ಅಗಾಧವಾದುದು, ವಚನ ಸಾಹಿತ್ಯದ ಮೂಲಕ ಶರಣರು ನಾಡಿಗೆ ಅಪಾರ ಜ್ಞಾನ ನೀಡಿದ್ದಾರೆ ಎಂದರು.
ಉಪನ್ಯಾಸ ನೀಡಿದ ಪಂ. ಡಾ. ಮೃತ್ಯುಂಜಯ ಶೆಟ್ಟರ್ ಅವರು, ವಚನ ಸಾಹಿತ್ಯ ಹಾಗೂ 12ನೇ ಶತಮಾನದ ಶರಣೆಯರ ವಚನಗಳ ಸಾರವನ್ನು ವಿವರಿಸಿದರು. ಪ್ರಸ್ತುತ ದಿನಮಾನಗಳಲ್ಲಿ ನಮಗೆ ಆಧ್ಯಾತ್ಮಿಕತೆಯ ಅವಶ್ಯಕತೆ ಬಹಳಷ್ಟಿದೆ. ಇಂತಹ ಉತ್ತಮ ಕಾರ್ಯಕ್ರಮವನ್ನು ಅಕ್ಕನ ಬಳಗ ಏರ್ಪಡಿಸಿರುವುದು ಹರ್ಷದ ಸಂಗತಿ ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ಗೀತಾ ಮುಳ್ಳಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಲಕ್ಷ್ಮಿ ಪಾರ್ಶೆಟ್ಟಿ ಪ್ರಾರ್ಥನೆ ಹಾಡಿದರು. ಸುಲೋಚನ ಭೂಸನೂರ್ ನಿರೂಪಿಸಿದರು. ಕಾರ್ಯದರ್ಶಿ ನಾಗರತ್ನ ಬೆನ್ನೂರುಮಠ ಪರಿಚಯಿಸಿದರು. ನಿರ್ಮಲ ಅಂಗಡಿ ವಂದಿಸಿದರು.