ನಾಗೇಶ್ ಕಾಲೂರುಗೆ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ

datti award
Published on

ಮಡಿಕೇರಿ:

ಅಭಿವೃದ್ಧಿ ಕಾರ್ಯಗಳ ಜತೆ ಜತೆಗೆ ಪರಿಸರ ಸಂರಕ್ಷಣೆಯ ಕಾಳಜಿ ಕೂಡ ಇದ್ದಾಗ ಪ್ರಕೃತಿ ಮತ್ತು ಪ್ರಗತಿ ಜತೆಯಲ್ಲಿ ಸಾಗಲು ಸಾಧ್ಯವಿದೆ ಎಂದು ಹಿರಿಯ ಸಾಹಿತಿ ನಾಗೇಶ್ ಕಾಲೂರು ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಗು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪ್ರಕೃತಿ ಉಳಿಸಿಕೊಳ್ಳದೇ ಹೋದಲ್ಲಿ ಮಾನವನ ಅಂತ್ಯ ಖಂಡಿತ. ಪ್ರಗತಿ ನೆಪದಲ್ಲಿ ಪರಿಸರ ನಾಶ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಕೃತ್ತಿ ಸಂರಕ್ಷಣೆ ಮತ್ತು ಪ್ರಗತಿ ಯೋಜನೆ ಜತೆಯಾಗಿ ಸಾಗುವಂಥ ಚಿಂತನೆ ಅತ್ಯಗತ್ಯ. ಗಂಗೆ ಕೂಡ ತಲಕಾವೇರಿ ಬಂದು ವರ್ಷಕ್ಕೊಮ್ಮೆ ಕಾವೇರಿಯಲ್ಲಿ ಮಿಂದು ಪುನೀತಳಾಗುತ್ತಾಳೆ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇಂಥ ಪವಿತ್ರ ಕಾವೇರಿಯ ತೀರ್ಥರೂಪವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತೀಯೋರ್ವರೂ ಕಾಳಜಿ ತೋರಿಸಬೇಕು. ಕಾವೇರಿ ಸಂರಕ್ಷಣೆಗೆ ನಮ್ಮಿಂದ ಏನಾಗಬೇಕು ಎಂಬ ಆತ್ಮಾವಲೋಕನಕ್ಕೆ ಪ್ರತೀಯೋರ್ವರೂ ಮುಂದಾಗಬೇಕು. ಕೊಡಗಿನ ಹಿರಿಯರು ದೇವರಕಾಡು ಮೂಲಕ ಪರಿಸರ ಕಾಳಜಿಯ ಅತೀ ಮುಖ್ಯ ಕೊಡುಗೆ ನೀಡಿದ್ದಾರೆ ಎಂಬುದನ್ನು ಮರೆಯಬಾರದು. ತಾನು ಬರೆದ ಕಾವೇರಿ ದರ್ಶನಂಗಾಗಿ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಲಭಿಸಿದ್ದು, ಮಾನವನ ಆದಿಯಿಂದ ಅಂತ್ಯದವರೆಗೂ ಜೀವನದಲ್ಲಿ ಜಲದ ಮಹತ್ವವನ್ನು ಕಾವೇರಿ ದರ್ಶನಂ ನಲ್ಲಿ ಉಲ್ಲೇಖಿಸಿದ್ದೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ.ಸಿ. ನಾಣಯ್ಯ, ಹಿರಿಯ ಪತ್ರಕರ್ತ ಬಿ.ಎಸ್. ಗೋಪಾಲಕೃಷ್ಣ ಅವರ ಲೇಖನಿಯಲ್ಲಿ ತೀಕ್ಷ÷್ಣತೆಯಿತ್ತು ಕೊಡಗಿಗೆ ಸಮಸ್ಯೆ ಎದುರಾದಾಗಲೆಲ್ಲಾ ಸರ್ಕಾರವನ್ನು ತನ್ನ ಹರಿತ ಬರವಣಿಗೆ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಬರವಣಿಗೆ ಮತ್ತು ಪತ್ರಿಕಾ ವರದಿಯ ಶೈಲಿಗೆ ಗೋಪಾಲಕೃಷ್ಣರು ನಾಡಿನ ಪತ್ರಿಕಾರಂಗದಲ್ಲಿಯೇ ಮಾದರಿಯಾಗಿದ್ದಾರೆ. ಗೋಪಾಲಕೃಷ್ಣ ಹಾಕಿಕೊಟ್ಟ ಮಾರ್ಗದರ್ಶನ, ಪತ್ರಿಕೋದ್ಯಮದ ಆದರ್ಶದಿಂದಾಗಿಯೇ ಕೊಡಗಿನಲ್ಲಿ ಪತ್ರಿಕೋದ್ಯಮ ವ್ಯಾಪಾರವಾಗದೇ ಈ ಕ್ಷೇತ್ರ ಶುದ್ದವಾಗಿದೆ ಎಂದರು.

ದತ್ತಿ ಪ್ರಶಸ್ತಿ ವಿತರಿಸಿದ ರಾಜಲಕ್ಷಿö್ಮÃ ಗೋಪಾಲಕೃಷ್ಣ ಮಾತನಾಡಿ, ಗೋಪಾಲಕೃಷ್ಣ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿದ್ದರು. ಎಂಥಹದ್ದೇ ಸವಾಲು, ಸಂಕಷ್ಟ ಎದುರಾದಾಗಲೂ ಅಧರ್ಮ ಮಾರ್ಗದತ್ತ ಮನಸ್ಸು ಹರಿಸಲಿಲ್ಲ. ಯಾರನ್ನೂ ಆರ್ಥಿಕ ಸಹಾಯಕ್ಕಾಗಿ ಅಂಗಲಾಚಲಿಲ್ಲ ಎಂದು ಸ್ಮರಿಸಿಕೊಂಡರು.

ದತ್ತಿ ಪ್ರಶಸ್ತಿ ನೀಡಿದ್ದ ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ತನ್ಮಯತೆಯಿಂದ ಮಾಡು ಎಂಬ ಬುದ್ಧನ ತತ್ವವನ್ನು ತಂದೆ ಗೋಪಾಲಕೃಷ್ಣ ಪರಿಪಾಲಿಸಿದ್ದರು. ಕಾಟಾಚಾರಕ್ಕಾಗಿ ಯಾವುದೇ ಲೇಖನ ಬರೆಯಲಿಲ್ಲ. ಜೀವನದ ಆದರ್ಶಗಳಿಗೆ ಗೋಪಾಲಕೃಷ್ಣ ಸದಾ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕೊಡಗು ಸಾಹಿತ್ಯ ಕನ್ನಡ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ 10 ಕೃತಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ ನಾಗೇಶ್ ಕಾಲೂರು ವಿರಚಿತ ಕಾವೇರಿ ದರ್ಶನ ಪ್ರಶಸ್ತಿಗೆ ಅರ್ಹವಾಗಿತ್ತು. ಮೊದಲ ಬಾರಿಗೆ ಕಸಾಪದಿಂದ ಪುರುಷ ಲೇಖಕರ ಕೃತಿಗಳಿಗಾಗಿಯೇ ದತ್ತಿ ಪ್ರಶಸ್ತಿ ವಿತರಿಸಲಾಗುತ್ತಿದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ಕಂಬದಕಡ ಅಣೆಕಟ್ಟು ವಿರೋಧಿ ಹೋರಾಟಕ್ಕೆ ಶಕ್ತಿ ಪತ್ರಿಕೆಯ ಮೂಲಕ ಗೋಪಾಲಕೃಷ್ಣ ವೇದಿಕೆ ಕಲ್ಪಿಸದೇ ಹೋಗಿದ್ದರೆ ಅಂದಿನ ಕಾಲದಲ್ಲಿಯೇ ಕೊಡಗಿಗೆ ಗಂಡಾAತರ ಇತ್ತು ಎಂದು ಹೇಳಿದರು.

ಗಡಿನಾಡ ಸಂಚಾರಿ ವಾರಪತ್ರಿಕೆ ಸಂಪಾದಕ ಟಿ.ಪಿ. ರಮೇಶ್ ಮಾತನಾಡಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಸಾಪ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಪುದಿಯನೆರವನ ರೇವತಿ ರಮೇಶ್, ಅಲೆಮಾಡ ಚಿತ್ರಾ ನಂಜಪ್ಪ, ವಂದನಾ ಪೊನ್ನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net