ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದತ್ತಾತ್ರೇಯ ಜಯಂತಿ

Dattatreya Jayanti was celebrated at Ganapati Satchidananda Ashram
Published on

ಮೈಸೂರು: ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಂಗಳವಾರ ಶ್ರೀ ದತ್ತಾತ್ರೇಯ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಬೆಳಗ್ಗೆ ಗೋವುಗಳಿಗೆ ಹಣ್ಣು ತಿನ್ನಿಸಿ ಗೋಪೂಜೆ ಮಾಡಿ ನಂತರ ಶ್ರೀಚಕ್ರ ಪೂಜೆ ನೆರವೇರಿಸಿದರು. ದೇಶ ವಿದೇಶಗಳಿಂದ ಆಗಮಿಸಿದ್ದ ನೂರಾರು ಭಕ್ತರು ದತ್ತಾತ್ರೇಯ ಸ್ವಾಮಿಗೆ ಸಹಸ್ರ ಕಲಶ ತೈಲಾಭಿಷೇಕ ನೆರವೇರಿ ಸಿದರು. ಈ ವೇಳೆ ಕೊಚ್ಚಿ ಆಶ್ರಮದ ಭಜನಾ ತಂಡದಿಂದ ನಾಮ ಸಂಕೀರ್ತನೆ ನಡೆಯಿತು.

ಕಾರ್ಯಕ್ರಮದ ವೇಳೆ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಇಂದು ಅತ್ಯಂತ ಪವಿತ್ರವಾದ ದಿನ. ಕಾಮ, ಕ್ರೋಧ, ಲೋಭ, ಮದ, ಮತ್ಸರ ಎಲ್ಲವನ್ನು ಬಿಟ್ಟು ದತ್ತ ಉಪಾಸನೆ ಮಾಡಬೇಕು. ಈ ಶರೀರ ನಶ್ವರ. ನಾವು ಸುಖ ಅನುಭವಿಸಿದಂತೆಯೇ ಅದರ ಹಿಂದೆ ದುಃಖವೂ ಇರುತ್ತದೆ. ಹಾಗಾಗಿ ಎಲ್ಲ ಇಂದ್ರಿಯಗಳನ್ನು ನಿಗ್ರಹ ಮಾಡಬೇಕು. ಆಸೆಯೇ ದುಃಖಕ್ಕೆ ಮೂಲ. ಸುಖ ಮಾತ್ರ ಬೇಕು ಅಂದುಕೊಳ್ಳಬಾರದು. ಸುಖ, ದುಃಖ ಎರಡನ್ನೂ ಸಮಾನವಾಗಿ ಅನುಭವಿಸಬೇಕು ಎಂದು ಹೇಳಿದರು.

ಬರಿ ಸುಖವನ್ನಷ್ಟೇ ಅಪೇಕ್ಷೆ ಪಡಬಾರದು, ಧರ್ಮ ರಹಸ್ಯ ತಿಳಿದುಕೊಂಡಾಗ ಸುಖ, ದುಃಖ, ನೋವು ಎಲ್ಲವನ್ನು ಸಮಾನವಾಗಿ ತೆಗೆದುಕೊಳ್ಳಬಹುದು, ಜತೆಗೆ ಸದಾ ದತ್ತಸ್ಮರಣೆ ಮಾಡಿದರೆ ಎಲ್ಲವೂ ಒಳಿತೇ ಆಗಲಿದೆ. ದತ್ತನೇ ವಿಷ್ಣು, ದತ್ತನೆ ಶಿವನು, ದತ್ತನೆ ಜ್ಞಾನ, ದತ್ತ ಕೂಡ ಶಕ್ತಿಯಲ್ಲಿ ಲೀನವಾಗಿದ್ದಾನೆ. ಶ್ರೀ ಚಕ್ರ ಪೂಜೆ ಮಾಡಿದರೆ ದತ್ತನನ್ನೇ ಪೂಜೆ ಮಾಡಿದಂತೆ. ಇವೆರಡು ಒಂದೇ ಎಂಬುದನ್ನು ತಿಳಿದುಕೊಳ್ಳಿ ಎಂದು ಭಕ್ತರಿಗೆ ತಿಳಿಸಿಕೊಟ್ಟರು.

ಈ ಸಂದರ್ಭ ಸ್ವಾಮೀಜಿಯವರು ಮರಾಠಿ ಭಾಷೆಯ ದತ್ತ ದರ್ಶನಂ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯಶ್ರೀಗಳಾದ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಇದ್ದರು. ಸಂಜೆ ಆಶ್ರಮದ ಸಪ್ತಶ್ರೀ ಸರೋವರದಲ್ಲಿ ಶ್ರೀ ದತ್ತಾತ್ರೇಯ ತೆಪ್ಪೋತ್ಸವ ನಡೆಯಿತು. ನಂತರ ದತ್ತಾತ್ರೇಯನಿಗೆ ಕಾಕಡರತಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net