

ಬದಿಯಡ್ಕ: ಯತಿಗಳು ಸಮಾಜಕ್ಕೆ ಧರ್ಮದ ಮಾರ್ಗ ತೋರಿಸುವ ಶಕ್ತಿಗಳು. ಕಲಿಯುಗದಲ್ಲಿ ಸಮಾಜದ ಸಂಘಟನೆಯ ಮೂಲಕ ಈ ಕಾರ್ಯ ನಡೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.
ಸೋಮವಾರ ಬೆಳಗ್ಗೆ ಶ್ರೀ ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡು ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಲಕಾಲಕ್ಕೆ ಧರ್ಮ ಜಾಗೃತಿ ಕಾರ್ಯಕ್ಕೆ ಬೇಕಾದ ಮಾರ್ಗದರ್ಶನ ಯತಿಗಳು, ಪೂಜ್ಯರು, ಮಠಾಧಿಪತಿಗಳು ಮಾಡುತ್ತಾರೆ. ಧರ್ಮದ ಮಾರ್ಗದಲ್ಲಿ ಸಾಗಿ ಈಶ್ವರನ ಜತೆಗೆ ಸಾಯುಜ್ಯ ಕಾಣಬೇಕೆನ್ನುವುದು ನಮ್ಮ ಕಲ್ಪನೆ. ಭಕ್ತಿಗಿರುವ ಶಕ್ತಿ ಭಗವಂತನನ್ನೂ ಮೇಲೇಳಿಸುತ್ತದೆ. ವೈಯಕ್ತಿಕವಾಗಿ ಭಕ್ತಿಬೇಕು. ಸಮಾಜಕ್ಕೆ ಶಕ್ತಿ ಬೇಕು. ಇವೆರಡನ್ನೂ ಸಫಲವಾಗುವಂತೆ ಕರುಣಿಸುವವರು ಯತಿಗಳಾಗಿದ್ದಾರೆ ಎಂದರು.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು. ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಸೂರ್ಯನಾರಾಯಣ ಭಟ್ ನಿರೂಪಿಸಿದರು.