

ಯಲ್ಲಾಪುರ: ಅಮೃತಸಿದ್ಧಿ ಯೋಗದ ಸಂದರ್ಭದಲ್ಲಿ ದತ್ತ ಮೂರ್ತಿಯ ಪ್ರತಿಷ್ಠೆ ನೆರವೇರಿದೆ. ಅಮೃತವೂ, ಸಿದ್ಧಿಯೂ ಇರುವ ಕ್ಷೇತ್ರವಾಗಿ ಬೆಳೆಯಲಿದೆ. ಇದು ಕೇವಲ ಯಲ್ಲಾಪುರದ ಮಂದಿರವಲ್ಲ, ಎಲ್ಲಾ ಪುರಗಳ ಭಕ್ತರ ಮಂದಿರ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.
ಪಟ್ಟಣದ ನಾಯಕನಕೆರೆ ದತ್ತ ಮಂದಿರದಲ್ಲಿ ದೇವರ ಮರು ಪ್ರತಿಷ್ಠೆ, ಶಿಖರ ಪ್ರತಿಷ್ಠೆ ನೆರವೇರಿಸಿ, ಧರ್ಮ ಸಭೆಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ದತ್ತ ಎಂದರೆ ತನ್ನನ್ನೇ ಕೊಟ್ಟುಕೊಂಡವನು ಎಂದು ಅರ್ಥ. ಅಂತಹ ದತ್ತ ನಮಗೆ ಆದರ್ಶವಾಗಬೇಕು. ದತ್ತ ಜಯಂತಿಯ ಪರ್ವ ಕಾಲದಲ್ಲಿ ನಾವು ಸ್ವಾರ್ಥ, ಕ್ಷುಲ್ಲಕ ಭಾವ ತ್ಯಜಿಸುವ ಸಂಕಲ್ಪ ಮಾಡಬೇಕು ಎಂದರು.
ನುಡಿದಂತೆ ನಡೆಯಬೇಕು. ನುಡಿದದ್ದು ನಡೆಯಬೇಕು. ಹಾಗಾದರೆ ಮಾತ್ರ ಮನುಷ್ಯ ಮಹಾತ್ಮನಾಗಲು ಸಾಧ್ಯ. ಕಳೆದ ವರ್ಷ ಸಂಕಲ್ಪಿಸಿದ್ದ ಮಂದಿರ ನಿರ್ಮಾಣ ಕಾರ್ಯ ಈಗ ಪೂರ್ಣಗೊಂಡಿದೆ. ಗುರುವಿನ ವಾಣಿಯನ್ನು ಸತ್ಯ ವಾಣಿಯನ್ನಾಗಿಸಲು ಶಿಷ್ಯರ ಶ್ರಮ ಅಪಾರವಾದದ್ದು. ಅದರ ಫಲವಾಗಿ ಸುಂದರ ಮಂದಿರ ನಿರ್ವಣಗೊಂಡಿದೆ ಎಂದರು.
ದತ್ತನ ಪಾದುಕೆ ಇರುವ ಭಿಕ್ಷಾ ಮಂದಿರವನ್ನು ದತ್ತ ಮಂದಿರದ ಪಕ್ಕದಲ್ಲಿ ನಿರ್ವಿುಸಲಾಗುವುದು. ದತ್ತ ಭಿಕ್ಷೆ ನೀಡುವ, ಪಾದುಕೆಯನ್ನು ಪೂಜಿಸುವ, ಭಜಿಸಲು ಅವಕಾಶ ಕಲ್ಪಿಸಲಾಗುವುದು. ಕೇವಲ ಯಲ್ಲಾಪುರ ಮಾತ್ರವಲ್ಲ, ಎಲ್ಲಾ ಪುರಗಳ ಜನರೂ ಭಿಕ್ಷೆ ಸಮರ್ಪಿಸಬೇಕು. ಪ್ರತಿ ವರ್ಷ ದತ್ತ ಜಯಂತಿಯ ಸಂದರ್ಭದಲ್ಲಿ ದತ್ತ ಯಾತ್ರೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ನೀತಿ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕ ಶರತ್ ಬಚ್ಚೇಗೌಡ ಗುರುಗಳಿಗೆ ಫಲ ಸಮರ್ಪಿಸಿದರು. ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಸಮಿತಿಯವರಿಗೆ, ಶಿಲ್ಪಿಗಳಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಶಿವಾನಂದ ಅವಧೂತರಿಂದ ಈ ದೇವಸ್ಥಾನ ಆರಂಭಗೊಂಡು, ಇದೀಗ ಶ್ರೀಗಳಿಂದ ಉನ್ನತಿಗೇರುತ್ತಿದೆ. ಇನ್ನಷ್ಟು ಅಭಿವೃದ್ಧಿಗೊಂಡು, ಭಕ್ತರನ್ನು ಅನುಗ್ರಹಿಸುವ ಕೇಂದ್ರವಾಗಿ ಬೆಳೆಸಲು ಸಹಕಾರ ನೀಡುವುದಾಗಿ ತಿಳಿಸಿದರು.
ದತ್ತ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಷ ದತ್ತ ಜಯಂತಿಯಂದು ದತ್ತ ಮಂದಿರದಲ್ಲಿ ದೇವರ ಪ್ರತಿಷ್ಠಾಪನೆ ಮಾಡುವ ಸಂಕಲ್ಪವನ್ನು ಕಳೆದ ವರ್ಷ ದತ್ತ ಜಯಂತಿಯಂದು ಶ್ರೀಗಳು ಮಾಡಿದ್ದರು. ಅವರ ಆಶೀರ್ವಾದದೊಂದಿಗೆ ದೇವಸ್ಥಾನ ನಿರ್ವಣಗೊಂಡಿದೆ. ಎಲ್ಲರ ಭಕ್ತಿ, ಶ್ರಮ, ಸಹಕಾರದಿಂದ ದೇವಾಲಯ ನಿರ್ವಣಗೊಂಡಿದೆ ಎಂದರು.
ಡಾ.ಮಹೇಶ ಭಟ್ಟ ಅವರು ರಚಿಸಿದ ದತ್ತಾಷ್ಟಕ ವಾಚಿಸಿ, ಶ್ರೀಗಳಿಗೆ ಸಮರ್ಪಿಸಿದರು.
ಜಯಲಕ್ಷ್ಮೀ ಶ್ರೀನಿಧಿ ಹಾಗೂ ಗಣೇಶ ಭಾಗ್ವತ ಗುರುಗೀತೆ ಪ್ರಸ್ತುತಪಡಿಸಿದರು. ಅಶೋಕ ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು. ಎಂ.ರಾಜಶೇಖರ, ಚಂದ್ರಕಲಾ ಭಟ್ಟ, ರಾಘವೇಂದ್ರ ಮಧ್ಯಸ್ಥ ನಿರ್ವಹಿಸಿದರು.