ದತ್ತಮಾಲಾ ಅಭಿಯಾನ : ಶ್ರೀರಾಮಸೇನೆ ಕಾರ್ಯಕರ್ತರಿಂದ ಪಡಿ ಸಂಗ್ರಹ

Padi sangraha
Published on

ಚಿಕ್ಕಮಗಳೂರು: ಗುರುವಾರ ದತ್ತಪೀಠದಲ್ಲಿ ಶ್ರೀರಾಮಸೇನೆ ಹಮ್ಮಿಕೊಂಡಿರುವ ದತ್ತಮಾಲೆ ಅಭಿಯಾನದ ಅಂಗವಾಗಿ ಬುಧವಾರ ಕಾರ್ಯಕರ್ತರು ನಗರದಲ್ಲಿ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು.

ಬಸವನಹಳ್ಳಿಯ ನರಸಿಂಹಮೂರ್ತಿ ಅವರ ನಿವಾಸ ಸೇರಿದಂತೆ ಹಲವು ಮನೆಗಳಿಗೆ ತೆರಳಿದ ಭಕ್ತರಿಗೆ ಮಹಿಳೆಯರು ಪಾದಪೂಜೆ ನೆರವೇರಿಸಿದ ಬಳಿಕ ಅಕ್ಕಿ, ಕಾಯಿ, ಬೆಲ್ಲ, ಹಣ್ಣು ಇತ್ಯಾದಿಗಳನ್ನೊಳಗೊಂಡ ಪಡಿ ಅರ್ಪಿಸಿ ಆರತಿ ಬೆಳಗಿದರು.

ನಾಳೆ ಪಡಿ ಸಮರ್ಪಣೆ 

ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಪ್ರತಿವರ್ಷದಂತೆ ದತ್ತಮಾಲೆ ನಿಮಿತ್ತ ಭಿಕ್ಷಾಟಣೆ ಮೂಲಕ ಪಡಿ ಸಂಗ್ರಹ ಮಾಡಲಾಯಿತು. 5 ದಿನದ ಅಭಿಯಾನದಲ್ಲಿ ನಿತ್ಯ ಒಂದೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗುರುವಾರ ಪೀಠಕ್ಕೆ ತೆರಳಿ ಗುಹಾಂತರ ದೇವಾಲಯದಲ್ಲಿ ಪಾದುಕೆ ದರ್ಶನದ ಬಳಿಕ ಪಡಿ ಮತ್ತು ಮಾಲೆ ಅಲ್ಲಿ ಅರ್ಪಿಸಲಾಗುತ್ತದೆ ಎಂದರು.

ದತ್ತಪೀಠದಲ್ಲಿ ಅನ್ಯಧರ್ಮಿಯರು ಮೈಕ್ ಅಳವಡಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿರುವ ಜಿಲ್ಲಾಡಳಿತದ ಕ್ರಮ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವಂಥದ್ದಾಗಿದ್ದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದು ಸಮಾಜಕ್ಕೆ ನೋವಾಗಿದೆ

ದತ್ತಪೀಠದ ಮುಕ್ತಿ ಸಲುವಾಗಿ ನಿರಂತರ ಸಂಘರ್ಷ ನಡೆಯುತ್ತಿದ್ದು ಧಾರ್ಮಿಕ ಕಾರ್ಯಕ್ರಮದ ಜತೆ ಸಮಾಜ ಜಾಗೃತಿ ಮೂಡಿಸಲಾಗುತ್ತಿದೆ. ಮಂಗಳವಾರದ ದತ್ತಪೀಠದ ಧ್ವನಿವರ್ಧಕದ ಘಟನೆಯಿಂದ ಹಿಂದು ಸಮಾಜಕ್ಕೆ ಬಹಳ ನೋವುಂಟಾಗಿದೆ. ಸಂಘಟನೆಯ ರಾಜ್ಯ ಪ್ರಮುಖರು ನಗರಕ್ಕೆ ಆಗಮಿಸಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಎಲ್ಲರ ಸಮಕ್ಷಮದಲ್ಲಿ ಸಭೆ ನಡೆಸಿ ನಂತರ ಮೈಕ್ ಅಳವಡಿಸಿ ಪ್ರಾರ್ಥನೆ ನಡೆಸಿರುವುದರ ವಿರುದ್ಧ ಯಾವ ರೀತಿ ಮುಂದಿನ ಹೋರಾಟ ರೂಪಿಸಬೇಕೆಂದು ನಿರ್ಧರಿಸಲಾಗುತ್ತದೆ ಎಂದರು.

ಈ ಅಭಿಯಾನಕ್ಕೆ ರಾಜ್ಯದ ಪದಾಧಿಕಾರಿಗಳು ಮಾತ್ರ ಆಗಮಿಸಲಿದ್ದು ನೂರು ಭಕ್ತರಿಗೆ ಪಾದುಕೆ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಜಿಲ್ಲೆಯ ಎಷ್ಟು ಜನ ಆಗಮಿಸುತ್ತಾರೆಂಬುದು ಕಾದು ನೋಡಬೇಕಿದೆ ಎಂದರು.

ನಿರೀಕ್ಷೆ ಮೀರಿ ಭಕ್ತರ ಸಹಕಾರ

ಜಿಲ್ಲಾಧ್ಯಕ್ಷ ರಂಜಿತ್‍ಶೆಟ್ಟಿ ಮಾತನಾಡಿ, 15 ವರ್ಷದ ದತ್ತಮಾಲಾ ಅಭಿಯಾನದ ಅಂಗವಾಗಿ ಕಳೆದ 5 ದಿನಗಳಿಂದ ನಡೆಯುತ್ತಿರುವ ವಿವಿಧ ಧಾರ್ಮಿಕ-ಜನಜಾಗೃತಿ ಕಾರ್ಯಕ್ರಮಗಳಿಗೆ ಕರೊನಾ ನಡುವೆಯೂ ಭಕ್ತರು ನಿರೀಕ್ಷೆಗಿಂತ ಹೆಚ್ಚು ಸಹಕರಿಸಿದ್ದಾರೆ. ಹಲವು ಮನೆಗಳಲ್ಲಿ ಮಾತೆಯರು ಪಾದಪೂಜೆ ಮೂಲಕ ಸಂಸ್ಕಾರಯುತವಾಗಿ ಪಡಿ ಅರ್ಪಿಸಿ ಹೋರಾಟ ಬೆಂಬಲಿಸಿದ್ದಾರೆ ಎಂದರು.

ಜಿಲ್ಲಾ ಕಾರ್ಯದರ್ಶಿ ಮಹೇಶ್ ಮೇದರ್ ಮುಖಂಡರಾದ ಶರತ್, ಪವನ್‍ಶೆಟ್ಟಿ, ಧನುಷ್, ಅಭಿಷೇಕ್, ಜ್ಞಾನೇಂದ್ರ, ಮನೋಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net