

ಯಲ್ಲಾಪುರ: ಜನರಲ್ಲಿ ಸಂಸ್ಕಾರ, ಧರ್ಮ ಜಾಗೃತಿ ಉಂಟು ಮಾಡುವ ದೇವಾಲಯಗಳು ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯವನ್ನು ಮಾಡುತ್ತವೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಪಟ್ಟಣದ ನಾಯಕನಕೆರೆಯ ದತ್ತ ಮಂದಿರದ ನೂತನ ಶಿಲಾಮಯ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ತಾಲೂಕಿನಲ್ಲಿ ಸಂಚರಿಸಿ, ದೇವಸ್ಥಾನಗಳ ಪವಿತ್ರ ತೀರ್ಥಗಳನ್ನು ಸಂಗ್ರಹಿಸಿ, ಕಾರ್ಯಕ್ರಮದ ಜಾಗೃತಿ ಮೂಡಿಸಲು ಆಯೋಜಿಸಲಾದ ದತ್ತ ಮಂದಿರದ ಪ್ರತಿಕೃತಿಯ ರಥಯಾತ್ರೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಶಾಂತ ಸ್ಥಳದಲ್ಲಿ, ಸುಂದರವಾದ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ದತ್ತ ಮಂದಿರ ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವುದಲ್ಲದೆ, ಮನಸ್ಸಿಗೆ ಶಾಂತಿ, ಸಮಾಧಾನ ನೀಡುವ ಕೇಂದ್ರವಾಗಿ ಬೆಳೆಯಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಲೋಕಾರ್ಪಣೆ ಸಮಿತಿ ಉಪಾಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ, ರಥಯಾತ್ರೆಯಲ್ಲಿ ಭಕ್ತರು ಪಾಲ್ಗೊಳ್ಳುವುದಲ್ಲದೆ, ತನು,ಮನ, ಧನ ಸಹಾಯದ ಮೂಲಕ ಸಹಕಾರ ನೀಡಬೇಕು’ ಎಂದರು.
ಮಂದಿರ ನಿರ್ಮಾಣ ಸಮಿತಿಯ ಶ್ರೀಮಠದ ಉಸ್ತುವಾರಿ ಮಹೇಶ ಚಟ್ನಳ್ಳಿ ಸ್ವಾಗತಿಸಿದರು, ರಥಯಾತ್ರೆ ಸಂಚಾಲಕ ನಾರಾಯಣ ನಾಯಕ ವಂದಿಸಿದರು. ಪ್ರಮುಖರಾದ ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ಶ್ರೀರಂಗ ಕಟ್ಟಿ, ಪ್ರಸಾದ ಹೆಗಡೆ, ಮಹೇಶ ಗೌಳಿ, ನಾಗರಾಜ ಮದ್ಗುಣಿ, ನಾಗೇಶ ಯಲ್ಲಾಪುರಕರ್, ಕೆ.ಟಿ.ಭಟ್ಟ, ರಮೇಶ ಹೆಗಡೆ, ಕಿರಣ ಶೆಟ್ಟಿ, ಸಿ.ಜಿ.ಹೆಗಡೆ, ಕೃಷ್ಣ ಭಟ್ಟ , ಅನಂತ ಬಾಂದೇಕರ್, ಸತೀಶ ದಾನಗೇರಿ, ಶ್ರೀಮಠದ ಪ್ರತಿನಿಧಿಗಳಾದ ರಮಾನಂದ ತಲವಾಟ, ಶಾಂತಾರಾಮ ಹಿರೇಮನೆ, ಶ್ರೀಧರ ಹೆಗಡೆ ಇತರರಿದ್ದರು.
ರಥಯಾತ್ರೆಯ ಮೊದಲ ದಿನ ಶಾರದಾಂಬಾ ದೇವಸ್ಥಾನ, ಗ್ರಾಮದೇವಿ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಹಿತ್ಲಳ್ಳಿ ಲಕ್ಷ್ಮೀನರಸಿಂಹ ದೇವಸ್ಥಾನ, ಕೋಟೆಮನೆ ಗಣಪತಿ ದೇವಸ್ಥಾನ, ಸುಮೇರು ಜ್ಯೋತಿರ್ವನ ಕಾಗಾರಕೊಡ್ಲುಗಳಿಗೆ ತೆರಳಿ ಪವಿತ್ರ ತೀರ್ಥ ಸಂಗ್ರಹಿಸಲಾಯಿತು.