

ಮಹಾಲಿಂಗಪುರ: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿನ ದತ್ತ ಪೀಠಕ್ಕೆ ಇಸ್ಲಾಮಿಕ್ ಅತಿಕ್ರಮಣ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ 20 ವರ್ಷಗಳಿಂದ ಶ್ರೀರಾಮ ಸೇನಾ ಹೋರಾಟ ಮಾಡುತ್ತ ಬಂದಿದೆ ಎಂದು ಶ್ರೀರಾಮ ಸೇನಾ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾಂವಿ ಹೇಳಿದರು.
ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರಂತರ ಸಂಘರ್ಷ, ಹೋರಾಟ, ರಥಯಾತ್ರೆ, ಕಾನೂನು ಹೋರಾಟ, ಸಾಮೂಹಿಕ ದತ್ತ ಜಪ ಮುಂತಾದವುಗಳಿಂದ ನಮ್ಮ ಹಕ್ಕು ಪಡೆಯಲು ಪ್ರಯತ್ನಿಸಲಾಗುತ್ತದೆ. ಪ್ರತಿವರ್ಷದಂತೆ ನ. 4 ರಿಂದ 10 ರ ವರೆಗೆ ದತ್ತ ಮಾಲಾ ಅಭಿಯಾನ-2024 ನಡೆಯಲಿದೆ. ನ.4 ರಂದು ಮಾಲಾ ಧಾರಣೆ, ನ.7 ರಂದು ದತ್ತ ದೀಪೋತ್ಸವ, ನ. 9 ರಂದು ಪಡಿ ಸಂಗ್ರಹ (ಭಿಕ್ಷಾಟನೆ) ಅ.10 ರಂದು ಹೋಮ, ಹವನ, ಪ್ರಸಾದ ವಿತರಣೆ, ಚಿಕ್ಕಮಗಳೂರಿನಲ್ಲಿ ಧರ್ಮಸಭೆ, ಶೋಭಾಯಾತ್ರೆ ನಡೆಯಲಿದೆ. ಪ್ರಮೋದ ಮುತಾಲಿಕ್ ನೇತೃತ್ವ ವಹಿಸುವರು.
ಹೈದ್ರಾಬಾದನ ಮಾಧವಿ ಲತಾ, ಹಿಂದುವಾದಿಗಳಾದ ಸಿ.ಟಿ. ರವಿ, ಪ್ರತಾಪ ಸಿಂಹ ಆಗಮಿಸುವರು. ಈ ವೇಳೆ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಸಂಘಟನೆಯ ಮುಖಂಡರಾದ ಈಶ್ವರ ಕೊಣ್ಯಾಗೋಳ, ಅನಿಲ ಕಿರಿಕಿರಿ, ಮಹಾಂತೇಶ ಗುಡೇಜಾರ, ಯಮನಪ್ಪ ಕೋರಿ, ಅರ್ಜುನ ನಾಗರಾಳ, ಮಹಾಂತೇಶ ಜೀರಗಾಳ ಇದ್ದರು.