

ಧಾರವಾಡ: ಚಿಕ್ಕಮಗಳೂರಿನ ಗುರು ದತ್ತಾತ್ರೇಯರ ಪವಿತ್ರ ಕ್ಷೇತ್ರ ದತ್ತಪೀಠದಲ್ಲಾದ ಇಸ್ಲಾಮಿಕ್ ಆಕ್ರಮಣದ ಮುಕ್ತಿಗಾಗಿ ಅ. 30ರಿಂದ ನ. 5ರವರೆಗೆ ರಾಜ್ಯಾದ್ಯಂತ ಶ್ರೀರಾಮ ಸೇನೆಯಿಂದ ದತ್ತ ಮಾಲಾ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿಯ ಸಿದ್ಧಕೃಪಾ ಅದ್ವೆತ ಮಂದಿರದ ಶ್ರೀ ಸತ್ಯ ಪ್ರಮೋದೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠದಲ್ಲಿರುವ ಅಕ್ರಮ, ಅನಧಿಕೃತ ಗೋರಿಗಳು ಸರ್ಕಾರಿ ದಾಖಲೆಗಳ ಪ್ರಕಾರ ಅಲ್ಲಿಂದ 14 ಕಿ.ಮೀ. ದೂರದ ನಾಗೇನಹಳ್ಳಿ ಬಾಬಾಬುಡನ್ ದರ್ಗಾಕ್ಕೆ ಸ್ಥಳಾಂತರವಾಗಬೇಕು. ದತ್ತಪೀಠ ಹಿಂದುಪೀಠ ಎಂದು ಘೋಷಣೆಯಾಗಬೇಕು. ಪೀಠವು ಮುಜರಾಯಿ ಇಲಾಖೆಯ ಅಧಿನದಲ್ಲಿ ಇರುವುದರಿಂದ ಅಲ್ಲಿ ನಡೆಯುವ ಉರುಸ್ ಬಂದ್ ಆಗಬೇಕು ಎಂಬ ಆಗ್ರಹಗಳೊಂದಿಗೆ ಅಭಿಯಾನ ನಡೆಸಲಾಗುವುದು. ಅಭಿಯಾನದ ಅಂಗವಾಗಿ 30ರಂದು ದತ್ತಮಾಲೆ ಧಾರಣೆ, ನ. 2ರಂದು ದತ್ತ ದೀಪೋತ್ಸವ, 4ರಂದು ಪಡಿ ಸಂಗ್ರಹ, 5ರಂದು ಬೆಳಗ್ಗೆ 7ಕ್ಕೆ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ, ಧರ್ಮಸಭೆ, 11 ಗಂಟೆಗೆ ಪಾದುಕೆ ದರ್ಶನ, ಹೋಮ- ಹವನ, ಮಹಾಪ್ರಸಾದ ಇರಲಿದೆ ಎಂದರು.
ಅಣ್ಣಪ್ಪ ದೀವಟಗಿ, ಮಂಜು ಕಾಟಕರ, ಮೈಲಾರ ಗುಡ್ಡಪ್ಪನವರ, ಬಸವರಾಜ ದುರ್ಗದ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.