ದೇವಲಗಾಣಗಾಪುರದಲ್ಲಿ ಅದ್ದೂರಿ ದತ್ತ ಜಯಂತಿ

1512 AFZ 01
Published on

ರಥವನೇರಿ ದರ್ಶನ ನೀಡಿದ ದತ್ತಾತ್ರೇಯ| ನಿರ್ಗುಣ ಪಾದುಕೆಗೆ ವಿಶೇಷ ಪೂಜೆ

ವಿಜಯವಾಣಿ ಸುದ್ದಿಜಾಲ ಅಫಜಲಪುರ

ಕಲ್ಯಾಣ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರ, ಕರ್ನಾಟಕ ಕಾಶಿ ಖ್ಯಾತಿಯ ಶ್ರೀ ದತ್ತಾತ್ರೇಯ ಅವತಾರದಲ್ಲಿ ನೆಲೆಸಿರುವ ಏಕಮಾತ್ರ ಕ್ಷೇತ್ರ ದೇವಲ ಗಾಣಗಾಪುರದಲ್ಲಿ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ಶ್ರೀ ದತ್ತ ಮಹಾರಾಜರ ಮಹಾರಥೋತ್ಸವ ಭಾನುವಾರ ಸಂಭ್ರಮದಿAದ ನೆರವೇರಿತು.

ಬೆಳಗ್ಗೆ ದತ್ತ ಮಹಾರಾಜರಿಗೆ ರುದ್ರಾಭಿಷೇಕ, ಕೇಸರಿ, ಕಸ್ತೂರಿ ಲೇಪನ, ಅರ್ಚನೆ, ಕಾಕಡಾರತಿ, ಅಲಂಕಾರ, ಮಹಾಮಂಗಳಾರತಿ ಬಳಿಕ ಮಹಾ ನೈವೇದ್ಯ ಸಮರ್ಪಿಸಲಾಯಿತು. ಭಕ್ತರು ಮಧುಕರಿ ಬೇಡಿ ಪ್ರಸಾದ ಸೇವಿಸಿದರು.

ಅರ್ಚಕರು ಹಾಗೂ ಪ್ರಮುಖರ ಸಮ್ಮುಖದಲ್ಲಿ ಸಂಜೆ ಮಹಾರಥೋತ್ಸವ ನಡೆಯಿತು. ಗರ್ಭಗುಡಿಯಲ್ಲಿದ್ದ ಶ್ರೀ ಬಾಲ ದತ್ತ ಮಹಾರಾಜ ಮೂರ್ತಿಯನ್ನು ಮಂತ್ರಘೋಷದೊAದಿಗೆ ದೇವಸ್ಥಾನ ಆವರಣಕ್ಕೆ ತಂದ ಬಳಿಕ ಪುಷ್ಪಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ರಥಕ್ಕೆ ಚಾಲನೆ ನೀಡಲಾಯಿತು. ಅಸಂಖ್ಯ ಭಕ್ತರು ಭಕ್ತಿಯಿಂದ ಗುರುವಿನ ತೇರನೆಳೆದು ಕೃತಾರ್ಥರಾದರು.

ಶ್ರೀ ದತ್ತ ಮಹಾರಾಜ್‌ಕಿ ಜೈ.. ದಿಗಂಬರ ದಿಗಂಬರ ಶ್ರೀಪಾದವಲ್ಲಭ ದಿಗಂಬರ.. ಗುರುದೇವ ದತ್ತ.. ನಮೋ ದತ್ತಾತ್ರೇಯ ಸೇರಿ ಹಲವು ಜೈಘೋಷಗಳು ಮೊಳಗಿದವು. ಜನರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ, ನಾಣ್ಯ ಎಸೆದು ಹರಕೆ ತೀರಿಸಿದರು. ರಥೋತ್ಸವದ ಮಾರ್ಗದುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿ ಹೂವು ಹಾಕಿದ್ದರು. ತಮಟೆ, ಬ್ಯಾಂಡ್, ಶಹನಾಯಿ, ಭಜನೆ ಹಾಗೂ ಕೀರ್ತನೆಗಳು ಗಮನಸೆಳೆದವು. ರಾತ್ರಿ ನಿರ್ಗುಣ ಮಠದ ಪ್ರಾಂಗಣದಲ್ಲಿ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ, ಭಜನೆ, ಕೀರ್ತನೆ ಬಳಿಕ ಮಹಾಮಂಗಳಾರುತಿ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು.

ಸಾಲಕಾರಿ ಕಾರ್ಯದರ್ಶಿ ಚೈತನ್ಯ ಪೂಜಾರಿ, ಮಧುಕರ ಭಟ್ಟ ಪೂಜಾರಿ, ಋಷಿಕೇಶ ಪೂಜಾರಿ, ಪ್ರಸಾದ ಪೂಜಾರಿ, ಉದಯಕುಮಾರ ಪೂಜಾರಿ, ರತ್ನಾಕರ ಪೂಜಾರಿ, ಅಲರ್ಕ ಪೂಜಾರಿ, ಧನಂಜಯ ಪೂಜಾರಿ, ಬಾಲಕೃಷ್ಣ ಪೂಜಾರಿ, ಸದಾಶಿವಭಟ್ಟ ಪೂಜಾರಿ, ಆದಿತ್ಯ ಪೂಜಾರಿ, ಪ್ರಿಯಾಂಕ ಭಟ್ಟ ಪೂಜಾರಿ ಇತರರಿದ್ದರು.

ಸಿಪಿಐಗಳಾದ ಸಂತೋಷ ತಾವರಖೇಡ, ಪ್ರಕಾಶ ಯಾತನೂರ, ಚಂದ್ರಶೇಖರ, ಪಿಎಸ್‌ಐಗಳಾದ ರಾಹುಲ್ ಪವಾಡೆ, ಸೋಮನಿಂಗ ಒಡೆಯರ್, ಹೇಮಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net