ಸಾಧ್ವಿನಿಯರ ಜತೆ ತಾರಾ ಮೆರಗು: ಮಹಿಳೆಯರಿಂದ ಸಂಕೀರ್ತನಾ ಯಾತ್ರೆ

Anasuya Jayanthi
Published on

ಚಿಕ್ಕಮಗಳೂರು: ದತ್ತಜಯಂತಿ ಹಾಗೂ ಅನಸೂಯಾ ಜಯಂತಿ ಪ್ರಯುಕ್ತ ಭಜನೆ, ಜಯಘೋಷದೊಂದಿಗೆ ಸಾಧ್ವಿನಿಯರು ಹಾಗೂ ತಾರಾ ಮೆರುಗಿನೊಂದಿಗೆ ನಗರದಲ್ಲಿ ಭಾನುವಾರ ಜರುಗಿದ ಸಂಕೀರ್ತನಾ ಯಾತ್ರೆ ಗಮನ ಸೆಳೆಯಿತು.

ಶ್ರೀ ಬೋಳರಾಮೆಶ್ವರ ದೇವಾಲಯ ಆವರಣದಲ್ಲಿ ಹುಬ್ಬಳ್ಳಿ ಶಾರದಾಶ್ರಮದ ಮಾತಾಜಿ ತೇಜೋಮಯಿ, ಆನಂದಾಶ್ರಮದ ಮಾತೋಶ್ರೀ ಮಾಣಿಕೇಶ್ವರಿ, ಚಿಕ್ಕಮಗಳೂರು ಶಾರದಾಶ್ರಮದ ಶುಭವ್ರತ ಪ್ರಾಣ, ವಿಜಯಪುರ ಅರುಢಾಶ್ರಮದ ಯೋಗೇಶ್ವರಿ, ಸಂಸದೆ ಶೋಭಾ ಕರಂದ್ಲಾಜೆ ಇತರರು ಶ್ರೀ ಗುರು ದತ್ತಾತ್ರೇಯರ ಉತ್ಸವ ಮೂರ್ತಿಗೆ ಪುಷ್ಪಾರ್ಪಣೆ ನೆರವೇರಿಸಿ ಯಾತ್ರೆಗೆ ಚಾಲನೆ ನೀಡಿದರು.

ಕೇಸರಿಮಯ ಉಡುಗೆ:
ಕೇಸರಿ ಸೀರೆಯುಟ್ಟ ವನಿತೆಯರು ಜೈಕಾರ, ಭಜನೆಯೊಂದಿಗೆ ದತ್ತನ ನಾಮಸ್ಮರಣೆ ಮಾಡುತ್ತಾ ಭಗವಧ್ವಜದೊಂದಿಗೆ ಆರಂಭಿಸಿದ ಸಂಕೀರ್ತನಾ ಯಾತ್ರೆಯ ಮುಂಭಾಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ನಾಯಕಿಯರು ದತ್ತಾತ್ರೇಯರ ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದರು. ಬಹಳಷ್ಟು ವನಿತೆಯರು ಪೇಟಾ, ಶಾಲಿನ ರಂಗಿನಲ್ಲಿ ಮಿಂಚಿದರೆ ಯುವತಿಯರ ಘೋಷಣೆ ಮುಗಿಲು ಮುಟ್ಟುತ್ತಿತ್ತು. ಇದೇ ವೇಳೆ ಶ್ರೀ ಗುರು ದತ್ತಾತ್ರೇಯರ ಉತ್ಸವಮೂರ್ತಿ ಸಹ ಗಮನ ಸೆಳೆಯಿತು.

ಪೀಠದಲ್ಲಿ ಧಾರ್ಮಿಕ ಕಾರ್ಯಕ್ರಮ:
ಐಜಿ ರಸ್ತೆ, ರತ್ನಗಿರಿ ರಸ್ತೆ ಮೂಲಕ ಸಾಗುವಾಗ ಮಾರ್ಗದ ಬದಿಯಲ್ಲಿ ಭಕ್ತರು ಅಲ್ಲಲ್ಲಿ ರಸ್ತೆ ಬದಿ ನಿಂತು ಸ್ವಾಗತಿಸಿದರು. ಕಾಮಧೇನು ಗಣಪತಿ ದೇವಾಲಯದಲ್ಲಿಯಾತ್ರೆ ಸಂಪನ್ನಗೊಳಿಸಿ ವಾಹನಗಳಲ್ಲಿ ಪೀಠಕ್ಕೆ ತೆರಳಿದರು. ಪೀಠದ ಆವರಣದಲ್ಲಿ ನಡೆದ ಗಣ ಹೋಮ, ದತ್ತ ಹೋಮಗಳ ಪೂರ್ಣಾಹುತಿ ಹಾಗೂ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಚಿತ್ರನಟಿಯರಾದ ತಾರಾ ಅನುರಾಧಾ, ಮಾಳವಿಕ, ಡಾ.ಪ್ರೇಮಾ, ವಾಗ್ಮಿ ಚೈತ್ರ ಕುಂದಾಪುರ, ತನ್ಮಯಿ ಪ್ರೇಮ್‍ಕುಮಾರ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾಶೆಟ್ಟಿ, ಜಿಪಂ ಸದಸ್ಯರಾದ ಜಸಂತ, ಕವಿತಾ ಲಿಂಗರಾಜು, ಬಜರಂಗದಳ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ವಿಎಚ್‍ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ, ಮುಖಂಡರಾದ ವರಸಿದ್ಧಿ ವೇಣುಗೋಪಾಲ್, ಸಿ.ಆರ್.ಪ್ರೇಂಕುಮಾರ್, ಎಚ್.ಡಿ.ತಮ್ಮಯ್ಯ ಇತರರು ಇದ್ದರು.

ಮೆರವಣಿಗೆ ವೇಳೆ ಅಡ್ಡರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡರೆ ಉಳಿದಂತೆ ಎಲ್ಲೂ ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net