ದತ್ತ ಜಯಂತಿಗೆ ಶಾಂತಿಯುತ ತೆರೆ

Dattapeeta
Published on

ಚಿಕ್ಕಮಗಳೂರು: ಮೈ ನಡುಗುವ ಚಳಿಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಳಗಿನಿಂದಲೆ ದತ್ತಪೀಠದ ಗುಹಾಂತರ ದೇವಾಲಯದಲ್ಲಿ ಪಾದುಕೆ ದರ್ಶನ ಪಡೆದ ಸಹಸ್ರಾರು ಭಕ್ತರು ಧನ್ಯತಾಭಾವ ಮೆರೆದರು.

ಹೋಮ, ಹವನ, ಪೂರ್ಣಾಹುತಿಯೊಂದಿಗೆ ಶ್ರೀ ದತ್ತ ಜಯಂತಿ ಉತ್ಸವ ಮಂಗಳವಾರ ಸಂಪನ್ನಗೊಂಡಿತು. ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ನಗರ ತಾಲೂಕಿನ ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಶ್ರೀ ದತ್ತಮಾಲೆ ಅಭಿಯಾನ ಸುಸೂತ್ರವಾಗಿ ನೆರವೇರಿತು.

ಕುಂದಾಪುರ ಮಹಿಳೆಯರು ಮತ್ತಿತರ ಭಾಗದ ನೂರಾರು ಭಕ್ತರು ಹೊನ್ನಮ್ಮನಹಳ್ಳ ಜಲಪಾತದಿಂದ ಭಜನೆ ಮಾಡುತ್ತ 10 ಕಿ.ಮೀ. ಪಾದಯಾತ್ರೆ ಮೂಲಕ ಪೀಠಕ್ಕೆ ಸಾಗಿ ಬ್ಯಾರಿಕೇಡ್ ಮೂಲಕ ಗುಹಾಂತರ ದೇವಾಲಯದಲ್ಲಿ ಪಾದುಕೆ ದರ್ಶನ ಪಡೆದು ಹೋಮದ ಸ್ಥಳಕ್ಕೆ ಆಗಮಿಸಿ ಇರುಮುಡಿ ಅರ್ಪಿಸಿದರು.
ಚಿಕ್ಕಮಗಳೂರು, ಬೆಂಗಳೂರು, ತಿಪಟೂರು, ಮಂಗಳೂರು, ಸಕಲೇಶಪುರ, ಕಾರ್ಕಳ, ಉಡುಪಿ, ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ, ಹಾಸನ, ಹುಬ್ಬಳ್ಳಿ, ಧಾರವಾಡ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಹೊನ್ನಮ್ಮನಹಳ್ಳ ಜಲಪಾತದಲ್ಲಿ ಮಿಂದೆದ್ದು ವಾಹನದ ಮೂಲಕ ಪೀಠಕ್ಕೆ ಸಾಗಿ ಪಾದುಕೆ ದರ್ಶನ ಪಡೆದರು.

ಚುಮುಚುಮು ಚಳಿಯಲ್ಲಿ ದರ್ಶನ:
ಕಾರ್ಕಳ ಸೇರಿದಂತೆ ದಕ್ಷಿಣ ಕನ್ನಡದ ಬಹಳಷ್ಟು ಭಕ್ತರು ಮುಂಜಾನೆಯೆ ಚಳಿ,ಗಾಳಿ ನಡುವೆ ತಣ್ಣನೆಯ ವಾತಾವರಣದಲ್ಲಿ ಆಗಮಿಸಿ ದೇವರ ದರ್ಶನದ ನಂತರ ಬೆಳಗ್ಗೆ 7.30 ರ ಸುಮಾರಿಗೆ ನಗರಕ್ಕೆ ಹಿಂತಿರುಗಿದ್ದರು. ಶಾಸಕ ಸಿ.ಟಿ.ರವಿ ನೇರವಾಗಿ ಪೀಠಕ್ಕೆ ಆಗಮಿಸಿ ಪಾದುಕೆ ದರ್ಶನದ ನಂತರ ಮಾಲೆ ವಿಸರ್ಜಿಸಿ ದತ್ತ ದೇವತಾರಾಧನೆಯಲ್ಲಿ ಪಾಲ್ಗೊಂಡರು.

ದತ್ತ ನಾಮಸ್ಮರಣೆ:
ನಾಡಿನ ಹಲವು ಕಡೆಗಳಿಂದ ಮಾಲೆಧರಿಸಿ ಆಗಮಿಸಿದ್ದ ಮಾಲಾಧಾರಿಗಳು ಇರುಮುಡಿ ಹೊತ್ತು ಭಜನೆ ಮಾಡುತ್ತ ದತ್ತನಾಮಸ್ಮರಣೆಯೊಂದಿಗೆ ಬ್ಯಾರಿಕೇಡ್‍ನಲ್ಲಿ ಸಾಗಿದರೆ, ಉಳಿದ ಭಕ್ತರು ವಿವಿಧ ಘೋಷಣೆಗಳೊಂದಿಗೆ ತೆರಳಿ ಪಾದುಕೆ ದರ್ಶನ ಪಡೆದರು. ನೂರಾರು ಮೀ. ದೂರದಲ್ಲಿ ಪೊಲೀಸರು ಲೋಹ ಶೋಧಕ ಯಂತ್ರದ ಮೂಲಕ ಭಕ್ತರನ್ನು ತಪಾಸಣೆ ಮಾಡಿ ಬಿಡುತ್ತಿದ್ದರು. ಜಿಲ್ಲಾಡಳಿತದಿಂದ ಗುಹಾಂತರ ದೇವಾಲಯದಲ್ಲಿ ಪಾದುಕೆ ಇರಿಸಿ ಪುಷ್ಪಾಲಂಕಾರ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಬಿಗಿ ಪೊಲೀಸ್ ಭದ್ರತೆ:
ನಗರದಲ್ಲಿ ನಡೆದ ಸಂಕೀರ್ತನ ಯಾತ್ರೆಯಲ್ಲಿ ಪೊಲೀಸರ ನಿರೀಕ್ಷೆಗೂ ಮೀರಿ ಸೇರಿದ್ದ ಭಕ್ತರ ಸಂಖ್ಯೆಯನ್ನು ಗಮನಿಸಿ ಮುನ್ನೆಚ್ಚರಿಕೆಯಾಗಿ ನಗರ ಸೇರಿದಂತೆ ಪೀಠದ ಆವರಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಸಿಸಿ ಕ್ಯಾಮೆರಾ ಹಾಗೂ ಡ್ರೋಣ್ ಕ್ಯಾಮೆರಾ ಮೂಲಕ ಹದ್ದಿನ ಕಣ್ಣಿಡಲಾಗಿತ್ತು. ನಗರದ ಹನುಮಂತಪ್ಪ ವೃತ್ತ, ಕೈಮರ, ಅತ್ತಿಗುಂಡಿ ಸೇರಿದಂತೆ ಹಲವೆಡೆ ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಗಾಲ್ಫ್ ಕ್ಲಬ್ ತಿರುವು, ಕೈಮರ, ತಿಪ್ಪನಹಳ್ಳಿ ಎಸ್ಟೇಟ್, ಕೆಮ್ಮಣ್ಣುಗುಂಡಿ ಕ್ರಾಸ್‍ಗಳಲ್ಲಿ ಪೋಲಿಸ್ ಚೆಕ್‍ಪೋಸ್ಟ್ ತೆರೆದು ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಬಿಡಲಾಗುತ್ತಿತ್ತು. ಗುಹಾಂತರ ದೇವಾಲಯದ ಆವರಣ, ಧಾರ್ಮಿಕ ಸಭೆಯ ಸ್ಥಳ, ಮಾಣಿಕ್ಯಧಾರ, ಗಾಳಿಕೆರೆ ಸೇರಿ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಗಿರಿಶ್ರೇಣಿಯಲ್ಲಿ ಚಳಿ ಇದ್ದುದರಿಂದ ರಾತ್ರಿ ಮೊಕ್ಕಾಂ ಹೂಡಿದ ಪೊಲೀಸರು ಮುಂಜಾನೆಯೂ ಬೆಂಕಿ ಕಾಯಿಸಿಕೊಂಡು ಕರ್ತವ್ಯ ನಿರ್ವಹಿಸಿದರು.

ಸಾವಿರಕ್ಕೂ ಹೆಚ್ಚು ವಾಹನಗಳು:
ಜಿಲ್ಲೆ ಹಾಗೂ ನಾಡಿನ ಹಲವೆಡೆಯಿಂದ 550ಕ್ಕೂ ಹೆಚ್ಚು ದ್ವಿಚಕ್ರ, 400ಕ್ಕೂ ಹೆಚ್ಚು ನಾಲ್ಕು ಚಕ್ರ, ಟಿಟಿ ಸೇರಿ ಸಾವಿರಾರು ವಾಹನಗಳಲ್ಲಿ ಕೇಸರಿ ಧ್ವಜ ಕಟ್ಟಿಕೊಂಡು ಆಗಮಿಸಿದರು. ಕೆಲವರ ವಾಹನ ಸಂಪೂರ್ಣ ಕೇಸರಿ ರಂಗಿನಲ್ಲಿ ಅಲಂಕರಿಸಿ ದೊಡ್ಡ ಧ್ವಜದ ರೊಂದಿಗೆ ಸ್ಪೀಕರ್ ಕಟ್ಟಿಕೊಂಡು ಟಾಪ್‍ಮೇಲೆ ಕುಳಿತ ಭಕ್ತರು ಬಜರಂಗಿ ಗೀತೆಗೆ ಹರ್ಷೋದ್ಗಾರದೊಂದಿಗೆ ಕೇಕೆ ಹಾಕುತ್ತಾ ಸಾಗಿದ ದೃಶ್ಯ ಕಂಡುಬಂತು.

ಹೋಮ-ಹವನ:
ರಘುನಾಥ್ ಆವಧಾನಿಗಳ ನೇತೃತ್ವದಲ್ಲಿ ದತ್ತದೇವತಾ, ಆದಿತ್ಯಾಹಿ ನವಗ್ರಹ, ಮೃತ್ಯುಂಜಯ ದೇವತಾ, ನಕ್ಷತ್ರಗಳ ಆರಾಧನೆ, ರುದ್ರಾಭಿಷೇಕ ನೆರವೇರಿಸಿ, ನವಗ್ರಹ, ಗಣಪತಿ, ದತ್ತಹೋಮದೊಂದಿಗೆ ನಾಡಿನಲ್ಲಿ ಕರೊನಾ ನಿವಾರಣೆಗಾಗಿ ಧನ್ವಂತರಿ ಹೋಮ ಪೂರ್ಣಾಹುತಿ ನಡೆಸಿ ಮಂಗಳಾರತಿ ಮಾಡಲಾಯಿತು. ಹಾಸನದ ರಾಘವ ಶರ್ಮ, ವಲ್ಲೀಶ್ ಶರ್ಮ, ಚಂದ್ರಶೇಖರ್ ಸಾತ್ ನೀಡಿದರು.

ಅಂಗಡಿ-ಹೋಟೆಲ್‍ಗಳು ಬಂದ್:
ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ಹಿಂತಿರುಗುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದತ್ತಪೀಠದಿಂದ, ಅತ್ತಿಗುಂಡಿ, ಕೈಮರ, ರಾಮನಹಳ್ಳಿ, ಐಜಿ ರಸ್ತೆ ಮಾರ್ಗವಾಗಿ ಮೂಗ್ತಿಹಳ್ಳಿವರೆಗೂ ಹಾಂದಿ, ಭೂತನಕಾಡು, ವಸ್ತಾರೆವರೆಗೂ ಎಲ್ಲ ಅಂಗಡಿ, ಹೋಟೆಲ್‍ಗಳನ್ನು ಮಂಗಳವಾರ ಬೆಳಗ್ಗೆ 4 ರಿಂದ ರಾತ್ರಿ 12 ಗಂಟೆವರೆಗೆ ಬಂದ್ ಮಾಡಿಸಲಾಗಿತ್ತು. ನಗರದ ಹಲವೆಡೆ ವಾಹನ ಪಾರ್ಕಿಂಗ್‍ಗಳನ್ನು ನಿಷೇಧಿಸಿ ಕಟ್ಟೆಚ್ಚರ ವಹಿಸಲಾಗಿತ್ತು.

ಸಂಸದ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ್, ರಾಜ್ಯ ಸಹ ಸಂಚಾಲಕರಾದ ಕೆ.ಆರ್.ಸುನೀಲ್, ಮುರಳಿ ಕೃಷ್ಣ ಅಸಂದಡ್ಕ, ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ವಿಎಚ್‍ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ, ಆರ್.ಡಿ.ಮಹೇಂದ್ರ, ಯೋಗೇಶ್‍ರಾಜ್ ಅರಸ್, ಸಂತೋಷ್‍ಕೊಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ವರಸಿದ್ದಿವೇಣುಗೋಪಾಲ್, ಎಚ್.ಡಿ.ತಮ್ಮಯ್ಯ, ಬಿ.ರಾಜಪ್ಪ, ಸಿ.ಆರ್.ಪ್ರೇಮ್‍ಕುಮಾರ್, ರವಿ ದೇವನೂರು, ಮಧುಕುಮಾರ್ ರಾಜ್, ಪುಷ್ಪರಾಜ್, ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್, ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ನಿರ್ದೇಶಕ ರಾಜೇಂದ್ರ, ಸಿಡಿಎ ಅಧ್ಯಕ್ಷ ಆನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net