ದತ್ತಜಯಂತಿ: ಸಂಕೀರ್ತನಾ ಯಾತ್ರೆಗೆ ಹರಿದು ಬಂದ ಭಕ್ತ ಸಮೂಹ

Sankeerthana Yathra
Published on

ಚಿಕ್ಕಮಗಳೂರು: ಶ್ರೀ ದತ್ತ ಜಯಂತಿ ಪ್ರಯುಕ್ತ ಸೋಮವಾರ ನಗರದಲ್ಲಿ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಗೆ ನಿರೀಕ್ಷೆಗೂ ಮೀರಿ ಹರಿದು ಬಂದ ಭಕ್ತ ಸಮೂಹ ಉತ್ಸಾಹದಲ್ಲಿ ಮಿಂದೆದ್ದಿತು.ವಿಎಚ್‍ಪಿ ಹಾಗೂ ಬಜರಂಗದಳ ಹಮ್ಮಿಕೊಂಡಿದ್ದ ಯಾತ್ರೆ ದತ್ತಾತ್ರೇಯ ಮೂರ್ತಿಗೆ ಮಹಾ ಆರತಿ ಬೆಳಗುವ ಮೂಲಕ ಶಾಂತಿಯುತವಾಗಿ ಸಂಪನ್ನಗೊಂಡಿತು.

ಗುರು ದತ್ತಾತ್ರೇಯನ ಮೂರ್ತಿಗೆ ಪೂಜೆ:
ನಗರದ ಶ್ರೀ ಕಾಮಧೇನು ಮಹಾಶಕ್ತಿ ಗಣಪತಿ ದೇವಾಲಯದ ಬಳಿ ಶ್ರೀ ಗುರುದತ್ತಾತ್ರೇಯನ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾಲಂಕೃತ ವಾಹನದಲ್ಲಿ ಯಾತ್ರೆಗೆ ಚಾಲನೆ ನೀಡಲಾಯಿತು. ಕೇಸರಿ ಧ್ವಜದೊಂದಿಗೆ ಪಾಲ್ಗೊಂಡಿದ್ದ ನಾಡಿನ ಸಹಸ್ರಾರು ಭಕ್ತರ ಭಜನೆ, ಘೋಷಣೆ, ಹರ್ಷೋದ್ಗಾರಗಳು ಮುಗಿಲು ಮುಟ್ಟಿದವು. ಹನುಮಂತಪ್ಪ ವೃತ್ತಕ್ಕೆ ಯಾತ್ರೆ ಆಗಮಿಸುತ್ತಿದ್ದಂತೆ ನಿರೀಕ್ಷೆಗೂ ಮೀರಿ ಸೇರಿಕೊಂಡ ಭಕ್ತರಿಂದ ಎಂಜಿ ರಸ್ತೆ ಸಂಪೂರ್ಣ ಕೇಸರಿಮಯವಾಗಿ ಭಕ್ತರು ಕೇಕೆ ಹಾಕುತ್ತಾ ಸಾಗಿದ್ದು ಕಂಡು ಬಂತು.

ಮೆರವಣಿಗೆಯಲ್ಲಿ ಭಜನೆ:
ಯುವಕರ ತಂಡವೊಂದು ಪಂಜು ಹಿಡಿದು ಬೆಂಕಿ ಉಗುಳುತ್ತಾ ಸಾಗಿದಾಗ ಪೊಲೀಸರು ತಡೆಯಲು ಮುಂದಾದರು. ಉದಯ ಸಿಂಹ ನೇತೃತ್ವದಲ್ಲಿ ಹರೇ ಶ್ರೀನಿವಾಸ ಭಜನಾ ಮಂಡಳಿ ಮಹಿಳೆಯರು ಭಕ್ತಿಗೀತೆ ಹಾಡುತ್ತಾ ಹೆಜ್ಜೆ ಹಾಕಿ ಸಂಭ್ರಮಿಸಿದರು. ತನ್ಮಯಿ ಪ್ರೇಂಕುಮಾರ್ ನೇತೃತ್ವದ ಯುವತಿಯರ ತಂಡ ಉತ್ಸಾಹದಲ್ಲಿ ಘೋಷಣೆ ಹಾಕುತ್ತಾ ಕುಣಿದು ಕುಪ್ಪಳಿಸಿತು.

ಪೊಲೀಸರ ಕಣ್ಗಾವಲು:
ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಅಡ್ಡರಸ್ತೆಗಳಿಂದ ಯಾವುದೆ ವಾಹನಗಳಿಗೆ ಪ್ರವೇಶವಿಲ್ಲದಂತೆ ಮಧ್ಯಾಹ್ನ ಒಂದು ಗಂಟೆಯಿಂದಲೆ ಬ್ಯಾರಿಕೇಡ್‍ಗಳನ್ನು ಹಾಕಿ ಪೊಲೀಸರನ್ನು ನಿಯೋಜಿಸಿ ನಿರ್ಬಂಧ ಹೇರಲಾಗಿತ್ತು. ಪ್ರಾರ್ಥನಾ ಮಂದಿರ ದೇವಸ್ಥಾನದ ಮುಂದೆ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.

ಹಣ್ಣು-ಪ್ರಸಾದ ವಿತರಣೆ:
ಬಸವಹಳ್ಳಿಯ ಕರ್ನಾಟಕ ಆಟೋ ಸಂಘದವರು ನೂರಾರು ಕಲ್ಲಂಗಡಿ ಹಣ್ಣನ್ನು ಭಕ್ತರಿಗೆ ವಿತರಿಸಿದರೆ, ಹನುಮಂತಪ್ಪ ಸರ್ಕಲ್ ಆಟೋ ಚಾಲಕರ ಸಂಘದಿಂದ ಪ್ರಸಾದ ವಿತರಿಸಲಾಯಿತು. ಮೈಸೂರಿನ ದೇವರಾಜ್ ಮಾರಾಟಕ್ಕಿಟ್ಟಿದ್ದ ಕೇಸರಿ ವರ್ಣದ ಮೈಸೂರು ಪೇಟಾ ಮತ್ತು ವಸ್ತುಗಳಿಗೆ ಭಕ್ತರ ಬೇಡಿಕೆ ಹೆಚ್ಚಾಗಿತ್ತು.

ಗಮನ ಸೆಳೆದ ದೇವರ ಫ್ಲೆಕ್ಸ್ ಗಳು:
ಅಜಾದ್ ಪಾರ್ಕ್, ಜಾಲಿ ಫ್ರೆಂಡ್ಸ್ ಸರ್ಕಲ್ ಸೇರಿದಂತೆ ಹಲವು ವೃತ್ತದಲ್ಲಿ ವೀರಾಂಜನೇಯ, ಶ್ರೀರಾಮಚಂದ್ರನ ಮುಗಿಲೆತ್ತರದ ಫ್ಲೆಕ್ಸ್ ಗಳು ಭಕ್ತರ ಗಮನ ಸೆಳೆದವು. ನಾರಾಯಣಪುರದಲ್ಲಿ ಅಯೋಧ್ಯೆ ಮತ್ತು ಶ್ರೀರಾಮನ ಭಾವಚಿತ್ರವಿರಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ರಾರಾಜಿಸಿದ ಭಗವಾಧ್ವಜ:
ಬಸವನಹಳ್ಳಿ ಮುಖ್ಯರಸ್ತೆಯಿಂದ ಆಜಾದ್ ವೃತ್ತದವರೆಗೂ ಬಹುತೇಕ ಮನೆ ಅಂಗಡಿಗಳ ಮೇಲೆ ಭಗವಾಧ್ವಜಗಳು ರಾರಾಜಿಸುತ್ತಿದ್ದರೆ ವಿದ್ಯುತ್ ಕಂಬಗಳಿಗೆ ಬಾಳೆಕಂದು ಕಟ್ಟಿ ಭಕ್ತರನ್ನು ಸ್ವಾಗತಿಸಲಾಗಿತ್ತು. ಮಕ್ಕಳು ಸೈಕಲ್‍ಗಳಲ್ಲಿ ಭಗವಾಧ್ವಜ ಹಾಕಿದರೆ, ಆಟೋ, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ಶಿವಾಜಿ, ಶ್ರೀರಾಮ, ಆಂಜನೇಯ, ಓಂ ಚಿನ್ಹೆಯ ಕೇಸರಿ ವರ್ಣದ ಬೃಹತ್ ಧ್ವಜ ಕಟ್ಟಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶೋಭಾಯಾತ್ರೆ ರದ್ದು:
ಕರೊನಾ ಕಾರಣದಿಂದ ಆಯೋಜಕರು ಮೊದಲೆ ಯೋಜನೆ ರೂಪಿಸಿ ಶೋಭಾಯಾತ್ರೆ ಬದಲಿಗೆ ದತ್ತಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಿಯೋಜಿಸಿದ್ದರಿಂದ ಹೆಚ್ಚಿನ ಕಾರ್ಯಕರ್ತರು ಸೇರಲು ಅವಕಾಶವಿರಲಿಲ್ಲ ಆದರೂ ಮಾಲಾಧಾರಿಗಳು ಸೇರಿದಂತೆ ಭಾರಿ ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಜಯಘೋಷ ಹಾಕುತ್ತಾ ಸಂಭ್ರಮಿಸಿದರು. ನಾದಸ್ವರ ಹೊರತುಪಡಿಸಿ ಯಾವುದೆ ಕಲಾ ತಂಡಗಳು ಭಾಗವಹಿಸಿರಲಿಲ್ಲ.

ಮುಖ್ಯರಸ್ತೆಗಳಲ್ಲಿ ಸಾಗಿದ ಯಾತ್ರೆ:
ಶ್ರೀಕಾಮಧೇನು ಗಣಪತಿ ದೇವಾಲಯದಿಂದ ಹೊರಟ ಮೆರವಣಿಗೆ, ಜಾಲಿಫ್ರೆಂಡ್ಸ್ ವೃತ್ತ, ಮೆಸ್ಕಾಂ, ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಅಜಾದ್ ಪಾರ್ಕ್‍ನಲ್ಲಿ ಸಮಾವೇಶಗೊಂಡರು ಜನಪ್ರತಿನಿಧಿಗಳು, ಭಕ್ತರು, ಸಂಘಟನೆ ಮುಖಂಡರ ಸಮ್ಮುಖದಲ್ಲಿ ದತ್ತಾತ್ರೇಯರ ಮೂರ್ತಿಗೆ ಮಹಾ ಆರತಿ ಬೆಳಗುವ ಮೂಲಕ ಸಂಕೀರ್ತನಾ ಯಾತ್ರೆ ಮುಕ್ತಾಯಗೊಂಡಿತು.

ಎಸ್‍ಪಿ ಎಂ.ಎಚ್.ಅಕ್ಷಯ್. ಎಎಸ್ಪಿ ಎನ್.ಎಸ್.ಶ್ರುತಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಶಾಸಕ ಸಿ.ಟಿ.ರವಿ, ಬಜರಂಗದಳ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ್, ವಿಎಚ್‍ಪಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪೈ, ಆರ್.ಡಿ.ಮಹೇಂದ್ರ, ಯೋಗೀಶ್ ರಾಜ್ ಅರಸ್, ಪ್ರೇಂಕಿರಣ್, ಶಶಾಂಕ್, ಶಿವಣ್ಣ, ದೀಪಕ್, ಶರತ್, ಕೃಷ್ಣ, ಶ್ಯಾಮ್, ಜೈರಾಂ, ರಘು, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್, ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ವರಸಿದ್ದಿ ವೇಣುಗೋಪಾಲ್, ಸಿ.ಆರ್. ಪ್ರೇಂಕುಮಾರ್, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net