

ಕೋಲಾರ: ಕೋಮುಲ್ ಆಡಳಿತ ಮಂಡಳಿಯ ನಿರ್ದೇಶರ ಚುನಾವಣೆಯು ಜೂ.25ಕ್ಕೆ ನಿಗದಿಯಾಗಿದ್ದು, ಆಕಾಂಕ್ಷಿಗಳು ಅಧಿಕಾರದ ಗದ್ದುಗೆ ಹಿಡಿಯಲು ತೀವ್ರ ಕಸರತ್ತು ನಡೆಸಿದ್ದಾರೆ.
ಕೋಲಾರ ಹಾಲು ಸಹಕಾರ ಸಂಘಗಳ ಒಕ್ಕೂಟ (ಕೋಮುಲ್) ಆಡಳಿತ ಮಂಡಳಿ ನಿರ್ದೇಶಕ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಜೂ.25ದಿನಾಂಕ ನಿಗದಿಪಡಿಸಿ ಮಾ.29ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಕೋಲಾರ-&ಚಿಕ್ಕಬಳ್ಳಾಪುರ ಒಕ್ಕೂಟ ವಿಭಜನೆಯಾಗಿ ಪ್ರತ್ಯೇಕ ಒಕ್ಕೂಟ ರಚನೆ ಮಾಡಿದ್ದು, ಹೊಸದಾಗಿ ನೋಂದಣಿ ಮಾಡಿ ಆದೇಶಿಸಿರುವುದರಿಂದ ಎರಡೂ ಒಕ್ಕೂಟಗಳಿಗೆ ಆಯಾ ಜಿಲ್ಲೆಯ ಉಪ ವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ಸರ್ಕಾರ ನೇಮಕ ಮಾಡಿತ್ತು.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು 1960ರ ಉಪ ನಿಬಂಧಗಳಡಿ ಮತ್ತು ಒಕ್ಕೂಟದ ಉಪ ನಿಯಮಗಳಲ್ಲಿ ರ್ನಿದಿಷ್ಟ ಪಡಿಸಿರುವಂತೆ ಚುನಾವಣೆ ನಡೆಸಬೇಕಾಗಿರುವುದರಿಂದ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತ 2024ರ ಜೂ.15ರಂದು ಅಧಿಸೂಚನೆ ಹೊರಡಿಸಿ ಚುನಾವಣಾಧಿಕಾರಿಗೆ ಅನುಮತಿ ನೀಡಿದ್ದಾರೆ.
ಆದೇಶದ ಮೇರೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶಿಸಿ ವೇಳಾಪಟ್ಟಿ ನಿಗದಿಪಡಿಸಿ, ಒಕ್ಕೂಟದ ಆಡಳಿತಾಧಿಕಾರಿ ಕ್ರಮವಹಿಸಿ ಪದಾಧಿಕಾರಿಗಳ ಚುನಾವಣೆ ನಡೆಸಲು ಸೂಚಿಸಿದ್ದಾರೆ. ಒಟ್ಟು 18 ಆಡಳಿತ ಮಂಡಳಿ ನಿರ್ದೇಶಕರ ಪೈಕಿ ಮಹಿಳಾ ನಿರ್ದೇಶಕರು ಸೇರಿ 13 ಮಂದಿ ಚುನಾಯಿತ ಹಾಗೂ ಸರ್ಕಾರದ ನಾಮಿನಿ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಪ್ರತಿನಿಧಿ, ಪಶು ಸಂಗೋಪನೆ ಇಲಾಖೆ ಪ್ರತಿನಿಧಿ, ಸಹಕಾರ ಸಂಘಗಳ ನಿಬಂಧಕರ ಪ್ರತಿನಿಧಿ, ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಪ್ರತಿನಿಧಿ ತಲಾ ಒಬ್ಬರು ನಿರ್ದೇಶಕರಿರುತ್ತಾರೆ.
ಹಸು ಸಾಕೋರು ಒಬ್ಬರು, ಲಾಭ ಇನ್ನೊಬ್ಬರಿಗೆ
ಒಕ್ಕೂಟದ ಮಾನವ ಸಂಪನ್ಮೂಲ ಹಾಗೂ ಮಾರ್ಕೆಟಿಂಗ್ ಸೇರಿ ಇತರೆ ಚಟುವಟಿಕೆಗಳ ನಂತರ ಚುನಾವಣೆಗೆ ಕ್ರಮವಹಿಸಲಾಗಿತ್ತು. ಕೋಲಾರದ ಒಕ್ಕೂಟದ ನಿರ್ದೇಶಕ ಸ್ಥಾನ ಹೆಚ್ಚಿಸಿಕೊಳ್ಳಲು ಮತ ಕ್ಷೇತ್ರಗಳನ್ನು ವಿಂಗಡಿಸಿ, ಸರ್ವ ಸದಸ್ಯರ ಸಭೆ ಕರೆದು ಅನುಮೋದನೆ ಪಡೆದುಕೊಳ್ಳಲಾಗಿತ್ತು. ಇದರ ಬೆನ್ನಲೇ ಚುನಾವಣಾ ದಿನಾಂಕ ಘೋಷಿಸಿದ್ದು, ಮಾಜಿ ನಿರ್ದೇಶಕರು, ಹೊಸಬರು ಅಧಿಕಾರಕ್ಕೇರಲು ತೆರೆ ಮರೆಯಲ್ಲಿ ಕಸರತ್ತು ಶುರು ಮಾಡಿದ್ದಾರೆ.
ಕೆಲ ಮಾಜಿ ನಿರ್ದೇಶಕರು ಹಾಗೂ ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳು ತಮ್ಮ ಸ್ವಂತ ಕ್ಷೇತ್ರ ಬಿಟ್ಟು ಹೊರ ಗ್ರಾಮಗಳಲ್ಲಿನ ಹಾಲು ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಷೇರು ಪಡೆದು ಪದಾಧಿಕಾರಿಯಾಗಿದ್ದಾರೆ. ಡೆಲಿಗೇಟ್ ಪಡೆದು ಚುನಾವಣೆಗೆ ಸ್ಪರ್ಧಿಸಲು ತಯಾರು ನಡೆಸುತಿದ್ದಾರೆ. ಬೇರೆ ಊರಿನ ಸಂಘದಲ್ಲಿ ಷೇರು ಪಡೆದುಕೊಂಡಿರುವವರೇನು ಸ್ವಂತ ಹಸುಗಳನ್ನು ಮೇಯಿಸಿ, ಹಾಲು ಸಂಘಕ್ಕೆ ಸರಬರಾಜು ಮಾಡುವುದಿಲ್ಲ. ಇದರ ಹೆಸರಿನಲ್ಲಿ ಬೇರೆಯವರು ಹಸು ಸಾಕಿದರು, ವಹಿವಾಟು ಮಾತ್ರ ಆಕಾಂಕ್ಷಿ ಹೆಸರಿನಲ್ಲಿರುತ್ತದೆ. ಇಲ್ಲಿ ಹಸು ಸಾಕೊದು ಒಬ್ಬರಾದರೆ ಇದರ ಲಾಭ ಪಡೆದುಕೊಳ್ಳುವವರು ಮತ್ತೊಬ್ಬರು ಎಂಬ ಮಾತುಗಳು ಆಕಾಂಗಳಲ್ಲಿ ಹರಿದಾಡುತ್ತಿದೆ.
ಆಕಾಂಕ್ಷಿಗಳಿಂದ ಆಮಿಷವೊಡ್ಡಲು ತಯಾರಿ
ಒಕ್ಕೂಟದ ನಿರ್ದೇಶಕರಾಗುವುದು ಏನು ಸುಲಭದ ಮಾತಲ್ಲ, ಕಡಿಮೆ ಮತದಾರರು ಇರುವುದರಿಂದ ಆಕಾಂಕ್ಷಿಗಳು ನಗದು, ಬೆಲೆ ಬಾಳುವ ಉಡುಗೊರೆ ಹಾಗೂ ಪ್ರವಾಸ ಹಲವು ಆಮಿಷ ಒಡ್ಡಿ ಚುನಾವಣೆ ನಡೆಸುತ್ತಾರೆ. ಮತದಾರರು ಯಾರಿಗೆ ಅಶೀರ್ವಾದಿಸುತ್ತಾರೆ ಎಂಬುದನ್ನು ಚುನಾವಣೆ ತನಕ ಕಾದುನೋಡಬೇಕಾಗಿದೆ. ಕಳೆದ ಬಾರಿ ಚುನಾವಣೆಗೆ ನಿಂತಿದ್ದ ಅಭ್ಯರ್ಥಿಗಳು ಮತದಾರರಿಗೆ ತಿರುಪತಿ ವೆಂಕಟೇಶ್ವರಸ್ವಾಮಿ ೋಟೊ, ನಗದು, ಬೈಕ್ ಸಹ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಾರಿ ಚುನಾವಣೆ ಇನ್ನು ದುಬಾರಿಯಾಗುವ ಸಾಧ್ಯತೆಯಿದೆ. ಆಕಾಂಕ್ಷಿಗಳು ಮತದಾರರಿಗೆ ಏನು ಆಮಿಷವೊಡ್ಡಬೇಕು ಎಂಬ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.
ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ
ಕೋಲಾರ-&ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ಹಾಗೂ ಕೋಮುಲ್ ಚುನಾವಣೆಗಳು ಯಾವಾಗ ಯಾವಾಗ ನಡೆಯುತ್ತದೆ ಎಂಬ ಕುತೂಹಲ ಜನರಲ್ಲಿತ್ತು. ಇದೀಗ ಬ್ಯಾಂಕ್ ಚುನಾವಣೆ ಮೇ 28 ಹಾಗೂ ಒಕ್ಕೂಟದ ಚುನಾವಣೆ ಜೂ.25ಕ್ಕೆ ನಿಗದಿಯಾಗಿದೆ. ಎರಡೂ ಸಂಸ್ಥೆಗಳ ಚುನಾವಣೆ ರಾಜಕೀಯ ಪಕ್ಷಗಳು ಪ್ರತಿಷ್ಠಿಯಾಗಿದ್ದು, ಚುನಾವಣೆ ವಿಚಾರವಾಗಿ ಆಡಳಿತ ಪಕ್ಷ ಹಾಗೂ ಕೆಲವರು ಕಾನೂನು ಹೋರಾಟ ಸಹ ನಡೆಸಿದ್ದರು. ದಿನಾಂಕ ಘೋಷಣೆ ನಂತರ ಜೆಡಿಎಸ್, ಬಿಜೆಪಿ ಪಕ್ಷಗಳ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ರಾಜಕೀಯ ಪಕ್ಷಗಳ ಜನಪ್ರತಿನಿಧೀಗಳು ಸೊಸೈಟಿ ಹಾಗೂ ಸಂಘಗಳಿಂದ ತಮ್ಮ ಪಕ್ಷದ ಬೆಂಬಲಿಗರು ಡೆಲಿಗಟ್ ಪಡೆದುಕೊಂಡು ಅಭ್ಯರ್ಥಿಗಳಿಗೆ ಬೆಂಬಲ ಕೊಡಿಸಲು ಮುಂದಾಗಿದ್ದಾರೆ.